ಬೆಂಗಳೂರು, ನ. 13: ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಈ ರೈಲು ಬೆಂಗಳೂರು, ಹಾಸನ, ಸಕಲೇಶಪುರ, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳು ಹಾಗೂ ಕರಾವಳಿ ಪ್ರದೇಶಗಳನ್ನು ಸಂಪರ್ಕಿಸಿ ಗೋವಾದ ಮಡಗಾಂವ್ವರೆಗೆ ಸಂಚರಿಸಲಿದೆ. ಸುಮಾರು 670 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗವು ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ನಿರೀಕ್ಷೆಯಿದೆ.
ನಾಲ್ಕು ಅಮೃತ್ ಭಾರತ್ ರೈಲು ನಿಲ್ದಾಣಗಳ ಉದ್ಘಾಟನೆ
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಪಡಿಸಿರುವ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಇದರಿಂದ ಈ ಭಾಗಗಳ ರೈಲ್ವೆ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ಸಿಗಲಿದೆ.
ಬಾಗಲಕೋಟೆ-ವಂಡಾಲ್ ರೈಲು ಮಾರ್ಗ ದ್ವಿಗುಣೀಕರಣ ಲೋಕಾರ್ಪಣೆ
284 ಕಿಲೋಮೀಟರ್ ಉದ್ದದ ಗದಗ-ಹೊಟಗಿ ರೈಲು ಮಾರ್ಗ ದ್ವಿಗುಣೀಕರಣ ಯೋಜನೆಯ ಭಾಗವಾಗಿ ಪೂರ್ಣಗೊಂಡಿರುವ 45 ಕಿಲೋಮೀಟರ್ ಉದ್ದದ ಬಾಗಲಕೋಟೆ-ವಂಡಾಲ್ ರೈಲು ಮಾರ್ಗದ ದ್ವಿಗುಣೀಕರಣ ಕಾಮಗಾರಿಯನ್ನೂ ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಯೋಜನೆಯಿಂದ ಪ್ರಯಾಣಿಕರ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರ ಸುಧಾರಿಸುವುದರ ಜೊತೆಗೆ ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ದೊರೆಯಲಿದೆ. ಕೂಡ್ಗಿ ಎನ್ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಣೆ ಕೂಡ ಸುಗಮವಾಗಲಿದೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗ ಸಂಪೂರ್ಣ ವಿದ್ಯುದ್ದೀಕರಣ
ಇದಲ್ಲದೆ, 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನೂ ಪ್ರಧಾನಿ ಲೋಕಾರ್ಪಣೆಗೊಳಿಸಿದರು. ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬೆಂಗಳೂರು-ಮಂಗಳೂರು ನಡುವಿನ ಸಂಪೂರ್ಣ ರೈಲು ಮಾರ್ಗ ವಿದ್ಯುದ್ದೀಕರಣಗೊಂಡಂತಾಗಿದೆ.
ಒಟ್ಟಾರೆ, ವಂದೇ ಭಾರತ್ ರೈಲು ಸೇವೆ, ರೈಲು ನಿಲ್ದಾಣಗಳ ಪುನರಾಭಿವೃದ್ಧಿ, ಮಾರ್ಗ ದ್ವಿಗುಣೀಕರಣ ಹಾಗೂ ವಿದ್ಯುದ್ದೀಕರಣ ಯೋಜನೆಗಳ ಮೂಲಕ ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆಗೆ ಹೊಸ ವೇಗ ದೊರೆತಿದೆ.
