ಬೆಂಗಳೂರು: ಪರೀಕ್ಷೆ -1ರಲ್ಲಿ ಅನುತ್ತೀರ್ಣಗೊಂಡವರು ಅಥವಾ ಕಡಿಮೆ ಅಂಕ ಬಂದಿದೆ ಎಂದು ಭಾವಿಸಿದವರು ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಮರು ಮೌಲ್ಯಮಾಪನದ ಜತೆಗೆ ಇನ್ನೆರಡು ಪರೀಕ್ಷೆ ಬರೆಯುವ ಅವಕಾಶವಿದ್ದು ಉತ್ತೀರ್ಣಗೊಳ್ಳುವ ಮತ್ತು ಫಲಿತಾಂಶ ಸುಧಾರಿಸಿಕೊಳ್ಳುವ ಅವಕಾಶ ಇದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಏ. 13ರ ವರೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಏ 12ರಿಂದ 16ರ ವರೆಗೆ ಸಮಯವಿರುತ್ತದೆ. ಮರುಮೌಲ್ಯಮಾಪನ ಹಾಗೂ ಮರು ಎಣಿಕೆ ಗಾಗಿ ಅರ್ಜಿ ಸಲ್ಲಿಸಲು ಏ. 12ರಿಂದ 17ರ ವರೆಗೆ ಸಮಯ ನೀಡಲಾಗಿದೆ. ಸ್ಕ್ಯಾನ್ ಪ್ರತಿ ಪಡೆಯಲು ಪ್ರತೀ ವಿಷಯಕ್ಕೆ 530 ರೂ. ಮತ್ತು ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ.ಗಳನ್ನು ನಿಗದಿ ಮಾಡಲಾಗಿದೆ. ಶುಲ್ಕವನ್ನು ಆನ್ಲೈನ್ ಮತ್ತು ಆಫ್ಲೈನ್ ಚಲನ್ ಮುಖಾಂತರ ಪಾವತಿಸಲು ಅವಕಾಶವಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪರೀಕ್ಷೆ ಶುಲ್ಕ ಪಾವತಿಸಲು ಹಾಗೂ ಪುನರಾವರ್ತಿತ ಅಪೂರ್ಣ ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಪರೀಕ್ಷೆ ತಂತ್ರಾಂಶದಲ್ಲಿ ನೋಂದಣಿ ಮಾಡಲು ಏ. 8ರಿಂದ 15ರ ವರೆಗೆ ಸಮಯ ನೀಡಲಾಗಿದೆ. ದಂಡ ಸಹಿತವಾಗಿ ನೋಂದಣಿಗೆ ಏ. 17 ಕೊನೆಯ ದಿನವಾಗಿದೆ.
ಪುನರಾವರ್ತಿತರು ಒಂದು ವಿಷಯಕ್ಕೆ 140 ರೂ., ಎರಡು ವಿಷಯಗಳಿಗೆ 370 ರೂ., ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 400 ರೂ.ಗಳನ್ನು ನಿಗದಿ ಮಾಡಲಾಗಿದೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಒಂದು ವಿಷಯಕ್ಕೆ 175 ರೂ. ಒಂದು ವಿಷಯಕ್ಕೆ (ಎರಡನೇ ಬಾರಿಗೆ) 350 ರೂ. ನಿಗದಿ ಮಾಡಲಾಗಿದೆ.
ಅಂಕಪಟ್ಟಿಗಾಗಿ ಕಾಯಬೇಕು
ದ್ವಿತೀಯ ಪಿಯು ಪರೀಕ್ಷೆ-1 ಬರೆದ ವಿದ್ಯಾರ್ಥಿ ಗಳಿಗೆ ಇನ್ನು ಮುಂದಿನ ಪರೀಕ್ಷೆ-2 ಮತ್ತು ಪರೀಕ್ಷೆ -3 ಬರೆಯುವ ಅವಕಾಶ ಇರುವುದರಿಂದ ತತ್ಕ್ಷಣ ಅಂಕಪಟ್ಟಿ ವಿದ್ಯಾರ್ಥಿಗಳಿಗೆ ಲಭ್ಯವಾಗುವುದಿಲ್ಲ. ಪರೀಕ್ಷೆ -3ರ ಫಲಿತಾಂಶ ಪ್ರಕಟಗೊಂಡ ಬಳಿಕವೇ ಅಂಕಪಟ್ಟಿ ಲಭ್ಯವಾಗಲಿದೆ.
ಹಾಜರಾತಿ ಕೊರತೆ ಇರುವವರಿಗೆ 2-3ನೇ ಪರೀಕ್ಷೆ
ದ್ವಿತೀಯ ಪಿಯುಸಿ ಪರೀಕ್ಷೆ -1 ಕ್ಕೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದವರು ಗಾಬರಿಯಾಗಬೇಕಿಲ್ಲ. ಈ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ – 2, ಪರೀಕ್ಷೆ – 3ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಅವಕಾಶವನ್ನು ಪರೀಕ್ಷಾ ಮಂಡಳಿ ನೀಡಿದೆ.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಮೀರಿಸಿದ ಆಂಗ್ಲ ಮಾಧ್ಯಮದವರು!
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದವರಿಗೆ ಹೋಲಿಸಿದರೆ, ಆಂಗ್ಲ ಮಾಧ್ಯಮದವರು ಮೇಲುಗೈ ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ 2,08,794 ಮಂದಿ ಬರೆದಿದ್ದು, 1,17,703 ಮಂದಿ (ಶೇ. 56.37) ತೇರ್ಗಡೆ ಹೊಂದಿದ್ದಾರೆ. ಆಂಗ್ಲಮಾಧ್ಯಮದಲ್ಲಿ 4,29,011 ವಿದ್ಯಾರ್ಥಿಗಳು ಹಾಜರಾಗಿದ್ದು, 3,50,736 ಮಂದಿ (ಶೇ. 81.75) ತೇರ್ಗಡೆ ಹೊಂದಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲೇ ಪರೀಕ್ಷೆ ತೆಗೆದುಕೊಂಡಿದ್ದಾರೆ. ಹೀಗಾಗಿ ತೇರ್ಗಡೆ ಹೊಂದಿದವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕನ್ನಡದಲ್ಲೂ ಹೆಚ್ಚು ಮಂದಿ ಪರೀಕ್ಷೆ ಬರೆಯಲು ಈ ಬಾರಿ ಉತ್ಸಾಹ ತೋರಿರುವುದು ಅಚ್ಚರಿ ಮೂಡಿಸಿದೆ.
ಖಾಸಗಿ ಕಾಲೇಜುಗಳಲ್ಲೇ ಹೆಚ್ಚು ತೇರ್ಗಡೆ
ಸರಕಾರಿ ಪದವಿಪೂರ್ವ ಕಾಲೇಜುಗಳ 1,44,425 ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ 82,474 ಮಂದಿ (ಶೇ. 57.11) ಉತ್ತೀರ್ಣರಾದರೆ, ಉಳಿದವರು ಅನುತ್ತೀರ್ಣರಾಗಿದ್ದಾರೆ. ಅದೇ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ 3,30,458 ಮಂದಿಯ ಪೈಕಿ 2,73,156 (ಶೇ. 82.66) ಅಭ್ಯರ್ಥಿಗಳು ಉತ್ತೀರ್ಣ ಹೊಂದಿದರೆ, ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳ 8,929 ಅಭ್ಯರ್ಥಿಗಳ ಪೈಕಿ 7,695 ಮಂದಿ (ಶೇ. 86.18) ಉತ್ತೀರ್ಣರಾಗಿದ್ದಾರೆ.
ಪ್ರತೀ ಬಾರಿಯಂತೆ ಈ ಬಾರಿಯೂ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳಲ್ಲೇ ಹೆಚ್ಚು ಮಂದಿ ತೇರ್ಗಡೆ ಹೊಂದಿದ್ದಾರೆ. ಈ ಅಂಶವು ಸರಕಾರಿ ಕಾಲೇಜುಗಳಲ್ಲಿ ಸೂಕ್ತ ಶಿಕ್ಷಣ, ಸವಲತ್ತು ಒದಗಿಸುತ್ತಿಲ್ಲ ಎಂಬುದಕ್ಕೆ ಪುಷ್ಟಿ ನೀಡುವಂತಿದೆ. ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳು ಹಾಗೂ ಅನುದಾನ ರಹಿತ ಕಾಲೇಜುಗಳ ಉತ್ತೀರ್ಣ ಪ್ರಮಾಣವು ಉಳಿದ ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಹೋಲಿಸಿದರೆ ಹೆಚ್ಚಿದೆ. ಇನ್ನು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 62.60, ಬಿಬಿಎಂಪಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 68.88, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 78.58 ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ 5,414 ಮಂದಿಗೆ 100ಕ್ಕೆ 100 ಅಂಕ!
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಮೊದಲ ಸ್ಥಾನದಲ್ಲಿದೆ! ವಿಜ್ಞಾನ ವಿಷಯಗಳಾದ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದು ಸಹಜವಾಗಿ ಪ್ರತೀ ವರ್ಷವೂ ಕಂಡು ಬರುತ್ತದೆ. ಆದರೆ ಈ ಬಾರಿ ಅಚ್ಚರಿ ಎಂಬಂತೆ ಕನ್ನಡ ಭಾಷೆಯಲ್ಲಿ 5,414 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಇಷ್ಟಾದರೂ 600ಕ್ಕೆ 600 ಅಂಕ ಪಡೆದ ಅಭ್ಯರ್ಥಿಗಳಿಲ್ಲ. ಇನ್ನು ಇಂಗ್ಲಿಷ್-11, ಹಿಂದಿ-43, ಭೌತಶಾಸ್ತ್ರ-496, ರಸಾಯನಶಾಸ್ತ್ರ-613, ಗಣಿತಶಾಸ್ತ್ರ-4,038, ಜೀವಶಾಸ್ತ್ರ-2,346, ಇತಿಹಾಸ-958, ಅರ್ಥಶಾಸ್ತ್ರ-613, ಭೂಗೋಳಶಾಸ್ತ್ರ-45 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
