ರಾಮನಾಥಪುರ: ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ ಮತ್ತು 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ರಾಮನಾಥಪುರ ಸಮೀಪದ ದೊಡ್ಡಮಗ್ಗೆ ಗ್ರಾಮದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಸರ್ಪಭೂಷಣ ಮಠ ಹಾಗೂ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕನ್ನಡ ಭಾಷೆಗೆ ಶ್ರೀಮಂತ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯಿದೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಕನ್ನಡವನ್ನು ಕೇವಲ ಸಂವಹನದ ಭಾಷೆಯಾಗಿ ನೋಡದೆ, ನಮ್ಮ ಬದುಕಿನ ಅಸ್ಮಿತೆಯಾಗಿ ಗೌರವಿಸಬೇಕು. ಮುಂದಿನ ಪೀಳಿಗೆಗೂ ಕನ್ನಡದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಪ್ರದರ್ಶನದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಆಕರ್ಷಕ ಪ್ರದರ್ಶನ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ. ಮಂಜು, ತಮ್ಮ ಅಭಿಮಾನಿ ಬಳಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಉತ್ತಮ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ಕನ್ನಡದ ಮೇಲಿನ ಅಭಿಮಾನ ಮುಂದಿನ ಪೀಳಿಗೆಯಲ್ಲೂ ಬೆಳೆಯಬೇಕು. ಹಿರಿಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿ, ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿ, ಚುಲುಮೆ, ತೇಜೂರು, ಕೆಸವತ್ತೂರು ಹಾಗೂ ಟಿ. ಮಾಯಿಗೌಡನಹಳ್ಳಿ ಮಠಗಳ ಶ್ರೀಗಳು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾ ಮಂಜು, ಮಾಜಿ ಸಚಿವ ಕುಮಾರಸ್ವಾಮಿ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


ಕನ್ನಡಾಭಿಮಾನ, ಸಾಂಸ್ಕೃತಿಕ ವೈಭವ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
– ಕುಮಾರಸ್ವಾಮಿ ಎಂ.ಎನ್.
