ರಾಮನಾಥಪುರ: ಅರಕಲಗೂಡು ತಾಲೂಕಿನ ರಾಮನಾಥಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಬರದ ವಾತಾವರಣ ನಿರ್ಮಾಣವಾಗಿದ್ದರೂ, ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಾವೇರಿ ನದಿ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದೆ.
ತಲಕಾವೇರಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದ್ದು, ಅದರ ಪರಿಣಾಮವಾಗಿ ರಾಮನಾಥಪುರದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ವಹ್ನಿಪುಷ್ಕರಣಿಯಲ್ಲಿ ಕಾವೇರಿ ಮಾತೆಗೆ ಮೋರದ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅರಕಲಗೂಡು ತಾಲೂಕಿನ ರಾಮನಾಥಪುರ, ಕೇರಳಾಪುರ, ಕೊಣನೂರು ಸೇರಿದಂತೆ ಹಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಷ್ಟೇ ಸುರಿದಿದ್ದು, ಇನ್ನೂ ಅನೇಕ ಕಡೆಗಳಲ್ಲಿ ಮಳೆಯ ಕೊರತೆ ಮುಂದುವರಿದಿದೆ. ಆದರೂ ಕಾವೇರಿ ನದಿ ಪೂರ್ಣ ಕಾವೇರಿಯಾಗಿ ಹರಿಯುತ್ತಿರುವುದನ್ನು ಕಂಡು ಭಕ್ತರು ಹರ್ಷ ವ್ಯಕ್ತಪಡಿಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶೀಲಾಮಣಿ ಉಮೇಶ್, ಶೀತಲಕ್ಷ್ಮಿ ವೆಂಕಟೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಬಳಗದ ಯುವ ಘಟಕದ ಅಧ್ಯಕ್ಷ ಆರ್.ಕೆ. ಶ್ರೀನಿವಾಸ್, ಸದಸ್ಯ ಗಾರೆ ಲೋಕೇಶ್ ಸೇರಿದಂತೆ ಹಲವರು ಮೋರದ ಬಾಗಿನ ಅರ್ಪಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
– ಕುಮಾರಸ್ವಾಮಿ ಎಂ.ಎನ್.
