ರಾಮನಾಥಪುರ: ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಕೇಂದ್ರ ಬರ ವೀಕ್ಷಣಾ ತಂಡಕ್ಕೆ ಮನವಿ ಮಾಡಿದರು.
ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಗೆ ಕೇಂದ್ರ ಬರ ವೀಕ್ಷಣಾ ತಂಡ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಶಾಸಕ ಎ. ಮಂಜು ಅವರು ತಂಡದೊಂದಿಗೆ ಚರ್ಚೆ ನಡೆಸಿ ಕ್ಷೇತ್ರದ ಪರಿಸ್ಥಿತಿಯನ್ನು ವಿವರಿಸಿದರು.
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆಯೂ ಉಂಟಾಗಿದೆ ಎಂದು ಅವರು ತಂಡದ ಗಮನಕ್ಕೆ ತಂದರು.

ತೀವ್ರ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅಗತ್ಯ ಬರ ಪರಿಹಾರ ಹಾಗೂ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಎ. ಮಂಜು ಅವರು ಮನವಿ ಮಾಡಿದರು.
ಕ್ಷೇತ್ರದಲ್ಲಿ ಬರದಿಂದ ಉಂಟಾಗಿರುವ ನಷ್ಟ ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಸೂಕ್ತ ಪರಿಹಾರ ದೊರಕುವಂತೆ ಸಮಗ್ರ ವರದಿ ಸಲ್ಲಿಸುವಂತೆ ಅವರು ಬರ ವೀಕ್ಷಣಾ ತಂಡದ ಸದಸ್ಯರನ್ನು ಕೋರಿದರು.
ಈ ಸಂದರ್ಭದಲ್ಲಿ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ವಿವಿಧ ಮುಖಂಡರು, ರೈತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
