ರಾಮನಾಥಪುರ, ಅ. 23: ಇಲ್ಲಿನ ಸುಬ್ರಹ್ಮಣ್ಯ ನಗರದ ತಂಬಾಕು ಹರಾಜು ಮಾರುಕಟ್ಟೆಯ ಪ್ಲಾಟ್ಫಾರಂ 7 ಮತ್ತು 63ರ ಎರಡು ಹರಾಜು ಕಟ್ಟೆಗಳಲ್ಲಿ ತಂಬಾಕು ವಹಿವಾಟು ಆರಂಭವಾಗಿದ್ದು, ಮೊದಲ ದಿನ ಒಟ್ಟು 36 ಬೇಲ್ಗಳ 4,617 ಕೆ.ಜಿ. ತಂಬಾಕು ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ಸರಾಸರಿ ₹270 ಬೆಲೆ ದೊರೆತಿದೆ ಎಂದು ಹರಾಜು ಮಾರುಕಟ್ಟೆ ಅಧೀಕ್ಷಕ ಎಚ್.ವಿ. ವಿಜಯಕುಮಾರ್ ತಿಳಿಸಿದರು.
ವಹಿವಾಟಿನ ಬಳಿಕ ಕಚೇರಿಯಲ್ಲಿ ಮಾತನಾಡಿದ ಅವರು, ಪ್ಲಾಟ್ಫಾರಂ 7ರಲ್ಲಿ 18 ಬೇಲ್ಗಳ 2,330 ಕೆ.ಜಿ. ತಂಬಾಕು ಮಾರಾಟವಾಗಿದ್ದು, ₹6,26,400 ವಹಿವಾಟು ನಡೆದಿದೆ. ಪ್ಲಾಟ್ಫಾರಂ 63ರಲ್ಲಿ 18 ಬೇಲ್ಗಳ 2,297 ಕೆ.ಜಿ. ತಂಬಾಕು ಮಾರಾಟವಾಗಿ ₹6,20,190 ವಹಿವಾಟು ನಡೆದಿದೆ ಎಂದು ಮಾಹಿತಿ ನೀಡಿದರು. ಎರಡೂ ಮಾರುಕಟ್ಟೆಗಳಲ್ಲಿ ತಲಾ ಕೆ.ಜಿ.ಗೆ ಸರಾಸರಿ ₹270 ಬೆಲೆ ದೊರೆತಿದೆ ಎಂದು ತಿಳಿಸಿದರು.
ತಂಬಾಕು ಖರೀದಿಸಲು ಮೊದಲ ದಿನ ಐದು ಕಂಪನಿಗಳ ಪ್ರತಿನಿಧಿಗಳು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಖರೀದಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ರೈತರು ತಂಬಾಕು ಬೇಲ್ಗಳನ್ನು ಕನಿಷ್ಠ 50 ಕೆ.ಜಿ.ಯಿಂದ ಗರಿಷ್ಠ 150 ಕೆ.ಜಿ. ತೂಕದವರೆಗೆ ಮಾರುಕಟ್ಟೆ ಒದಗಿಸುವ ಚೀಲಗಳಲ್ಲಿ ಅಚ್ಚುಕಟ್ಟಾಗಿ ಕಟ್ಟಿ ತರಬೇಕು. ಪ್ರತಿ ಬ್ಯಾರನ್ಗೆ 20 ಬೇಲ್ ಚೀಲಗಳನ್ನು ಪಡೆದುಕೊಳ್ಳಲು ಅವಕಾಶವಿದ್ದು, ಬೇಡಿಕೆಗೆ ಅನುಗುಣವಾಗಿ ತಂಬಾಕು ಉತ್ಪಾದಿಸುವುದರ ಜತೆಗೆ ಪ್ಲಾಸ್ಟಿಕ್, ಕಸಕಡ್ಡಿ ಹಾಗೂ ಇತರ ತ್ಯಾಜ್ಯ ವಸ್ತುಗಳು ತಂಬಾಕಿನಲ್ಲಿ ಸೇರದಂತೆ ಶುಚಿತ್ವ ಮತ್ತು ಗುಣಮಟ್ಟ ಕಾಪಾಡಬೇಕು ಎಂದು ವಿಜಯಕುಮಾರ್ ಮನವಿ ಮಾಡಿದರು.

ಕಳೆದ ವರ್ಷಕ್ಕಿಂತ ₹50 ಕಡಿಮೆ ಬೆಲೆ
ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷ ಪ್ರತಿ ಕೆ.ಜಿ. ತಂಬಾಕಿಗೆ ಗರಿಷ್ಠ ₹320 ಬೆಲೆ ದೊರೆತಿತ್ತು. ಆದರೆ ಈ ಬಾರಿ ಮೊದಲ ದಿನ ಗರಿಷ್ಠ ಬೆಲೆ ₹270ರಷ್ಟಿದ್ದು, ಪ್ರತಿ ಕೆ.ಜಿ.ಗೆ ₹50 ಕಡಿಮೆಯಾಗಿದೆ ಎಂದು ತಂಬಾಕು ಬೆಳೆಗಾರ ಮುಲೆಹೊಸಹಳ್ಳಿ ಕಂಬೇಗೌಡ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬೆಳೆಯುವ ವರ್ಜೀನಿಯಾ ತಂಬಾಕು ವಿಶ್ವದಾದ್ಯಂತ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಆದರೂ ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯದಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ತಂಬಾಕು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕನಿಷ್ಠ ₹250ರಿಂದ ₹350ರವರೆಗೆ ಬೆಲೆ ನೀಡಲು ಆಗ್ರಹ
ತಂಬಾಕು ಬೆಳೆಯಲು ಕೂಲಿ, ರಸಗೊಬ್ಬರ ಹಾಗೂ ಇತರ ಕೃಷಿ ವೆಚ್ಚಗಳು ಸೇರಿ ಪ್ರತಿ ಕೆ.ಜಿ.ಗೆ ಸುಮಾರು ₹250ರಿಂದ ₹350 ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಸಿಗುವ ಬೆಲೆ ಉತ್ಪಾದನಾ ವೆಚ್ಚಕ್ಕೂ ಸಾಲದಂತಾಗಿದೆ ಎಂದು ಕಂಬೇಗೌಡ ಹೇಳಿದರು.
ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಎ. ಮಂಜು, ಸಂಸದ ಶ್ರೇಯಸ್ ಪಟೇಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ಕರ್ನಾಟಕದ ತಂಬಾಕು ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ ಕನಿಷ್ಠ ₹250ರಿಂದ ಗರಿಷ್ಠ ₹350ರವರೆಗೆ ಉತ್ತಮ ಬೆಲೆ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಂಬಾಕು ಬೆಳೆಗಾರರ ಉತ್ಪಾದನಾ ವೆಚ್ಚ, ಮಾರುಕಟ್ಟೆ ಬೆಲೆ ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ.
– ಕುಮಾರಸ್ವಾಮಿ ಎಂ.ಎನ್.
