ರಾಮನಾಥಪುರ: ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳು ಹೆಚ್ಚಾಗಿ, ಅವುಗಳ ಮೂಲಕ ಧಾರ್ಮಿಕ ಚಟುವಟಿಕೆಗಳು ನಡೆಯುತ್ತ ಹೋದಂತೆ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯೂ ಬೆಳೆಯುತ್ತದೆ ಎಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕ ಆರ್.ಎಸ್. ನರಸಿಂಹಮೂರ್ತಿ ಹೇಳಿದರು.
ರಾಮನಾಥಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇವಾಲಯಗಳಿಗೆ ತೆರಳುವಾಗ ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದು ದೇವರಿಗೆ ಸಮರ್ಪಿಸುವುದು ನಮ್ಮ ಸಂಪ್ರದಾಯವಾಗಿದೆ. ಅದೇ ರೀತಿ ದೇವಾಲಯದಿಂದ ಹಿಂದಿರುಗುವಾಗ ನಮ್ಮಲ್ಲಿರುವ ಕೆಟ್ಟ ಭಾವನೆಗಳನ್ನು ಅಲ್ಲಿಯೇ ಬಿಟ್ಟು ಬರುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ದೇವಾಲಯದಲ್ಲಿ ಕೆಲಕಾಲ ಶಾಂತವಾಗಿ ಕುಳಿತು ಧ್ಯಾನ ಮಾಡುವ ಮೂಲಕ ಕೋಪ, ದ್ವೇಷ, ಅಹಂಕಾರ ಹಾಗೂ ಕೆಟ್ಟ ಆಲೋಚನೆಗಳನ್ನು ತೊರೆದು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ, ಮಾನಸಿಕ ನೆಮ್ಮದಿ ಹಾಗೂ ಧಾರ್ಮಿಕ ಪ್ರಜ್ಞೆ ಬೆಳೆಸುವ ಕೇಂದ್ರಗಳಾಗಬೇಕು ಎಂದು ತಿಳಿಸಿದರು.
ದೇವಾಲಯಗಳ ಸ್ಥಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಧಾರ್ಮಿಕ ಪ್ರಜ್ಞೆ ಜಾಗೃತವಾಗಲು ಸಾಧ್ಯ ಎಂದು ಆರ್.ಎಸ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
– ಕುಮಾರಸ್ವಾಮಿ ಎಂ.ಎನ್.
