ಹಾಸನ, ಜು. 25: ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೋ. ಬಿ.ಎಂ. ಭಟ್ ಅವರ ಜುಲೈ ತಿಂಗಳ ಸೇವಾ ಚಟುವಟಿಕೆಯ ಅಂಗವಾಗಿ, ವಲಯ–9ರ ವ್ಯಾಪ್ತಿಯ ಗೊರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೆಗಾ ಸೀಮಂತ (ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಹಾಯಕ ಗವರ್ನರ್ ರೋ. ಎ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ಮಿಡ್ಟೌನ್ ಅಧ್ಯಕ್ಷ ರೋ. ವಿಶ್ವನಾಥ್, ಹಾಸನ ಸನ್ರೈಸ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್, ರೋಟರಿ ಕ್ಲಬ್ ಅಧ್ಯಕ್ಷ ರೋ. ಪರಮೇಶ್ವರ ಹಾಗೂ ಸಕಲೇಶಪುರ ಶಾಸಕ ಮಂಜು ಅವರ ಪತ್ನಿ ಪ್ರತಿಭಾ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡಿದ್ದು, ಗರ್ಭಧಾರಣೆಯ ಆರೈಕೆ, ಪೌಷ್ಟಿಕ ಆಹಾರ, ಪ್ರಸವಪೂರ್ವ ಆರೋಗ್ಯ, ಗರ್ಭಾವಸ್ಥೆಯ ಅಪಾಯದ ಲಕ್ಷಣಗಳು ಹಾಗೂ ತಾಯಿ-ಮಗುವಿನ ಆರೋಗ್ಯ ಕುರಿತು ವೈದ್ಯಕೀಯ ತಜ್ಞರು ಸಮಗ್ರ ಮಾಹಿತಿ ನೀಡಿದರು.

ಗರ್ಭಿಣಿಯರ ಸೀಮಂತವನ್ನು ಸಾಂಕೇತಿಕವಾಗಿ ನೆರವೇರಿಸುವ ಮೂಲಕ ಸುರಕ್ಷಿತ ಮಾತೃತ್ವದ ಮಹತ್ವವನ್ನು ಸಾರಲಾಯಿತು. ಜೊತೆಗೆ ಪ್ರತಿಯೊಬ್ಬ ಫಲಾನುಭವಿಗೂ ಆರೋಗ್ಯಕರ ಗರ್ಭಧಾರಣೆಗೆ ನೆರವಾಗುವ ಪೌಷ್ಟಿಕಾಂಶ ಕಿಟ್ಗಳನ್ನು ವಿತರಿಸಲಾಯಿತು.
ವಲಯ 9ರ ಲೆಫ್ಟಿನೆಂಟ್ ರೋ. ಡಾ. ತೇಜಸ್ವಿ ಹೆಚ್.ಜೆ. ಅವರ ನೇತೃತ್ವದಲ್ಲಿ ಗೊರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ವಿವಿಧ ರೋಟರಿ ಕ್ಲಬ್ಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ಸನ್ರೈಸ್ ಕಾರ್ಯದರ್ಶಿ ರೋ. ಬಿ.ಎಂ. ದರ್ಶನ್, ಜಂಟಿ ಕಾರ್ಯದರ್ಶಿ ರೋ. ಎಸ್.ಸಿ. ರಾಜೇಶ್, ರೋ. ಆದರ್ಶ್, ರೋ. ಪುಷ್ಪ ಕೆ., ರೋ. ಶೈಲಾ ಸೇರಿದಂತೆ ಹಲವು ರೋಟರಿ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ರೋಟರಿ ಕ್ಲಬ್ ಆಫ್ ಹಾಸನ ಸನ್ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
