ಹಾಸನ, ಜು.14: ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಹೌಸ್ ಆಫ್ ಭಾರತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಾಲಗಾಮೆ ಸಮೀಪದ ಸೀಗೆಬೆಟ್ಟದಲ್ಲಿ ವಿಶೇಷ ಪರಿಸರ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜುಲೈ 12ರಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಳೆ ಮಲ್ಲೇಶ್ವರ ದೇವಸ್ಥಾನದ ಮೇಲಿರುವ ಮೂಲ ಶಿವನಗುಡಿ ಪ್ರದೇಶದಲ್ಲಿ ಒಂದು ಶಾಶ್ವತ ಡಸ್ಟ್ಬಿನ್ ಅಳವಡಿಸಲಾಯಿತು. ಜೊತೆಗೆ ದೇವಸ್ಥಾನದ ಪ್ರವೇಶ ದ್ವಾರ ಹಾಗೂ ಸೀಗೆ ಮಠದ ಆವರಣದಲ್ಲಿ ತಲಾ ಒಂದು ಡಸ್ಟ್ಬಿನ್ ಅಳವಡಿಸುವ ಮೂಲಕ ಒಟ್ಟು ಮೂರು ಶಾಶ್ವತ ಡಸ್ಟ್ಬಿನ್ಗಳನ್ನು ಸ್ಥಾಪಿಸಲಾಯಿತು.

ಇದೇ ಸಂದರ್ಭದಲ್ಲಿ ಬೆಟ್ಟದ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ವಿವಿಧ ಉಪಯುಕ್ತ ಗಿಡಗಳನ್ನು ನೆಡಲಾಯಿತು. ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಸೀಗೆಬೆಟ್ಟದ ವಿವಿಧ ಪ್ರದೇಶಗಳಲ್ಲಿ ಬೀಜದ ಉಂಡೆ (ಸೀಡ್ ಬಾಲ್)ಗಳನ್ನು ಪಸರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಮತ್ತು ಅವರ ಕುಟುಂಬಸ್ಥರು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಪ್ರತಿಜ್ಞೆ ಕೈಗೊಂಡರು. ಬಳಿಕ ಎಲ್ಲರೂ ಒಟ್ಟಾಗಿ ಉಪಾಹಾರ ಸೇವಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಜೋನ್–9ರ ಝೋನಲ್ ಲೆಫ್ಟಿನೆಂಟ್ ರೋ. ಡಾ. ತೇಜಸ್ವಿ, ಹಾಸನ ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ವಿ. ಮಧುಸೂದನ, ಯೋಗಗುರು ಚೇತನ್ ಗುರೂಜಿ, ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದಿಕ್ ಕಾಲೇಜಿನ ಡಾ. ಬಸವರಾಜ ಯಲಗಚ್ಚಿ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ಕೆ.ಎಸ್. ಯೋಗೇಶ್, ಕಾರ್ಯದರ್ಶಿ ದರ್ಶನ್, ನಿಕಟ ಪೂರ್ವ ಅಧ್ಯಕ್ಷ ಎಚ್.ಡಿ. ವಜ್ರಕುಮಾರ್, ನಿರ್ದೇಶಕರಾದ ಭುವನೇಶ್, ವೇಣುಗೋಪಾಲ್, ಗುರುಮೂರ್ತಿ, ಗವಿಗೌಡ, ಮಧು, ಕರುಣೇಶ್ ಸೇರಿದಂತೆ ಕ್ಲಬ್ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

ಹೌಸ್ ಆಫ್ ಭಾರತ್ ಸಂಸ್ಥಾಪಕರಾದ ಕಿರಣ್, ದರ್ಶನ್, ರಮೇಶ್ ಆಚಾರಿ, ಪೂರ್ಣಿಮಾ, ಹೇಮರಾಜು, ನಿಖಿಲ್, ಗುರುಸಜ್ಜನ್, ಕು. ಸಖಿ, ಯುವ ಮೋರ್ಚಾ ಮುಖಂಡ ಹರ್ಷಿತ್ ಹಾಗೂ ಅನೇಕ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.
ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
