ಬೆಂಗಳೂರು, ಜು.14: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ವೀಕ್ಷಿಸುವ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ವಿಶ್ವಕಪ್ನ ಪ್ರಮುಖ ಪಂದ್ಯಗಳು ನಡೆಯಲಿರುವ ದಿನಗಳಲ್ಲಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಮಧ್ಯರಾತ್ರಿ 3.30ರವರೆಗೆ ಆಹಾರ ಸೇವೆ ಒದಗಿಸಲು ಸರ್ಕಾರ ವಿಶೇಷ ಅನುಮತಿ ನೀಡಿದೆ.
ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (National Restaurant Association of India) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಜುಲೈ 14, 15 ಹಾಗೂ 19ರಂದು ಈ ವಿಶೇಷ ಸಡಿಲಿಕೆ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ನಿಗದಿತ ಸಮಯದವರೆಗೆ ಮಾತ್ರ ಕಾರ್ಯನಿರ್ವಹಿಸುವ ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ, ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ಅಭಿಮಾನಿಗಳ ಅನುಕೂಲಕ್ಕಾಗಿ ಈ ವಿನಾಯಿತಿ ನೀಡಲಾಗಿದೆ.
ಈ ಆದೇಶದಿಂದ ತಡರಾತ್ರಿವರೆಗೂ ಪಂದ್ಯ ವೀಕ್ಷಿಸುವ ಫುಟ್ಬಾಲ್ ಅಭಿಮಾನಿಗಳು ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವಿಸಲು ಅನುಕೂಲವಾಗಲಿದೆ. ಜೊತೆಗೆ ಹೋಟೆಲ್ ಉದ್ಯಮಕ್ಕೂ ವ್ಯಾಪಾರ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ.
ಸರ್ಕಾರ ನಿಗದಿಪಡಿಸಿರುವ ನಿಯಮಗಳು ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಕಾಪಾಡುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ
