ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದ ಅವರು, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಹುದ್ದೆ ತೊರೆದಿದ್ದಾರೆ.
ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ಬೆಳವಣಿಗೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಮೂಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಅಧಿಕೃತಗೊಂಡಿದೆ.
ರಾಜೀನಾಮೆ ಬಳಿಕ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಅಭಿಮಾನಿಗಳು “ಶಾಶ್ವತ ಸಿಎಂ ಸಿದ್ದರಾಮಯ್ಯ” ಎಂದು ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಭಾವುಕರಾದ ಸಿದ್ದರಾಮಯ್ಯ ಅಭಿಮಾನಿಗಳತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.
ರಾಜೀನಾಮೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಬೆಳೆಸಿದರು. ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ ಅವರು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಈ ಸಂದರ್ಭದಲ್ಲಿ ಸಚಿವ ಕೆ. ವೆಂಕಟೇಶ್, ಎಂಎಲ್ಸಿ ಡಾ. ಯತೀಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿದ್ದರು.
ರಾಜಕೀಯ ವಲಯದಲ್ಲಿ ಇದೀಗ ಮುಂದಿನ ಮುಖ್ಯಮಂತ್ರಿ ಆಯ್ಕೆ, ಸಚಿವ ಸಂಪುಟ ಪುನರ್ರಚನೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮುಂದಿನ ನಡೆ ಕುರಿತು ಚರ್ಚೆಗಳು ತೀವ್ರಗೊಂಡಿವೆ.
