ಸಿಯೋಲ್: ದಕ್ಷಿಣ ಕೊರಿಯಾ ತನ್ನ ಮೊದಲ ಸ್ವದೇಶಿ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಯನ್ನು (Nuclear-Powered Submarine) 2030ರ ದಶಕದ ಮಧ್ಯಭಾಗದೊಳಗೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. “ಜಾಂಗ್ಬೋಗೋ ಎನ್ ಪ್ರಾಜೆಕ್ಟ್” (Jangbogo N Project) ಹೆಸರಿನ ಈ ಯೋಜನೆಯನ್ನು 2026ರ ಮೇ 26ರಂದು ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ದಕ್ಷಿಣ ಕೊರಿಯಾದ ದಕ್ಷಿಣ ಗ್ಯೋಂಗ್ಸಾಂಗ್ ಪ್ರಾಂತ್ಯದ ಚಾಂಗ್ವೋನ್ನಲ್ಲಿ ನಡೆದ ಭವಿಷ್ಯ ರಕ್ಷಣಾ ತಂತ್ರ ಸಮಿತಿಯ (Committee on Future Defense Strategy) ಮೊದಲ ಸಭೆಯಲ್ಲಿ ಈ ಯೋಜನೆ ಘೋಷಿಸಲಾಯಿತು. ಜಲಾಂತರ್ಗಾಮಿಗಳನ್ನು ದೇಶೀಯ ಹಡಗು ನಿರ್ಮಾಣ ಹಾಗೂ ಅಣು ರಿಯಾಕ್ಟರ್ ತಂತ್ರಜ್ಞಾನ ಬಳಸಿಕೊಂಡೇ ನಿರ್ಮಿಸಲು ದಕ್ಷಿಣ ಕೊರಿಯಾ ಮುಂದಾಗಿದೆ.
ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಜಲಾಂತರ್ಗಾಮಿಗಳು ಕಡಿಮೆ ಸಮೃದ್ಧೀಕೃತ ಯುರೇನಿಯಂ (Low-Enriched Uranium) ಬಳಸಲಿವೆ. ಇದು 20% ಕ್ಕಿಂತ ಕಡಿಮೆ ಯುರೇನಿಯಂ-235 ಹೊಂದಿರುವ ಇಂಧನವಾಗಿದ್ದು, ದೀರ್ಘಕಾಲ ನಿರಂತರ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ಇದರ ಪರಿಣಾಮವಾಗಿ ಇಂಧನ ಮರುಪೂರೈಕೆಯ ಅವಶ್ಯಕತೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯ ಹೊಂದಿದ ಜಲಾಂತರ್ಗಾಮಿಗಳ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ದಕ್ಷಿಣ ಕೊರಿಯಾ ಸ್ಪಷ್ಟಪಡಿಸಿದೆ. ಜೊತೆಗೆ ಅಣ್ವಸ್ತ್ರ ವಿಸ್ತರಣೆ ತಡೆ ಒಪ್ಪಂದಗಳ (Non-Proliferation Obligations) ಪಾಲನೆ ಮುಂದುವರಿಸಲಾಗುವುದು ಹಾಗೂ ಇಂಧನ ಪೂರೈಕೆಗೆ ಅಮೆರಿಕದೊಂದಿಗೆ ಸಹಕಾರ ವಹಿಸಲಾಗುವುದು ಎಂದು ತಿಳಿಸಿದೆ.
ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ International Atomic Energy Agency ಜೊತೆಗೆ ಭದ್ರತಾ ಕ್ರಮಗಳ ಕುರಿತೂ ಸಹಕಾರ ಮುಂದುವರಿಯಲಿದೆ ಎಂದು ದಕ್ಷಿಣ ಕೊರಿಯಾ ಸರ್ಕಾರ ಹೇಳಿದೆ.
2026ರ ನವೆಂಬರ್ 13ರಂದು ಅಮೆರಿಕ, ದಕ್ಷಿಣ ಕೊರಿಯಾದ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ಘೋಷಣೆಯ ಬಳಿಕ ದೇಶದ ಪ್ರಮುಖ ಹಡಗು ನಿರ್ಮಾಣ ಕಂಪನಿಗಳಾದ Hanwha Ocean ಹಾಗೂ HD Hyundai Heavy Industries ಷೇರು ಮೌಲ್ಯ ಏರಿಕೆ ಕಂಡಿವೆ.
ಅಣುಶಕ್ತಿ ಚಾಲಿತ ಜಲಾಂತರ್ಗಾಮಿಗಳು ಡೀಸೆಲ್-ವಿದ್ಯುತ್ ಚಾಲಿತ ಜಲಾಂತರ್ಗಾಮಿಗಳಿಗಿಂತ ಹೆಚ್ಚು ಕಾಲ ಸಮುದ್ರದೊಳಗೆ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಸಮುದ್ರ ಭದ್ರತಾ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
