ರಾಮನಾಥಪುರ, ಅ. 14: ಗಣೇಶೋತ್ಸವವನ್ನು ಆಡಂಬರದಿಂದ ಆಚರಿಸುವ ಬದಲು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಭಾರತೀಯ ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ಸದಸ್ಯರು ಹಾಗೂ ವಕೀಲ ಆರ್.ಕೆ. ಚೇತನಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ದೇವಾಲಯದ ಆವರಣದಲ್ಲಿ 60ನೇ ವರ್ಷದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆಯ 24ನೇ ದಿನದ ಅಂಗವಾಗಿ ಬುಧವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಭಕ್ತರಿಗೆ ಪ್ರಸಾದ ಹಾಗೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಚೇತನಕುಮಾರಸ್ವಾಮಿ, ಭಾರತೀಯರಾದ ನಾವು ಮಾನವ ಶಕ್ತಿಯನ್ನು ಮೀರಿದ ದೈವಶಕ್ತಿಯ ಆರಾಧನೆಯ ಪರಂಪರೆಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿದ್ದೇವೆ. ಹಬ್ಬಗಳನ್ನು ಆಡಂಬರಕ್ಕೆ ಸೀಮಿತಗೊಳಿಸದೆ, ಭಕ್ತಿ ಹಾಗೂ ಅರ್ಥಪೂರ್ಣ ಆಚರಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಚಕ ರಾಘವಭಟ್ಟರು, ಸಮಿತಿ ಸದಸ್ಯರಾದ ವೇ. ಪ್ರವೀಣ್, ಶ್ರೀನಾಥ್, ಲಕ್ಷ್ಮೀಶ್, ನಾಗೇಶ್, ರವಿಸುಂದರ, ಕಾರ್ತಿಕ್, ರಾಘು, ಯೋಗೇಶ್, ಹೊಂಗನಸು ಹೋಟೆಲ್ನ ವೀಣಾ, ಸಹನಾ, ಮುರುಳಿ, ನಿಸರ್ಗ, ದೇವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್,
