ನವದೆಹಲಿ: ಔಷಧಿಗಳ ಹೆಸರಿನಲ್ಲಿ ಅಲ್ಕೋಹಾಲ್ (ಮದ್ಯ) ಅಂಶವಿರುವ ದ್ರವಗಳ ದುರುಪಯೋಗ ಮತ್ತು ಅಮಲೇರಿಸಿಕೊಳ್ಳಲು ಬಳಸುವುದನ್ನು ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯವು ಮಹತ್ವದ ಹೆಜ್ಜೆ ಇಟ್ಟಿದೆ. ಜುಲೈ 10, 2026 ರಂದು ‘ಔಷಧಿಗಳ ನಿಯಮಗಳು, 1945’ ಕ್ಕೆ (Drugs Rules, 1945) ತಿದ್ದುಪಡಿ ತರುವ ಮೂಲಕ, ಹೆಚ್ಚಿನ ಪ್ರಮಾಣದ ಇಥೈಲ್ ಅಲ್ಕೋಹಾಲ್ ಹೊಂದಿರುವ ಔಷಧಿಗಳನ್ನು ಇನ್ನು ಮುಂದೆ ಕಡ್ಡಾಯ ಪರವಾನಗಿ ಮತ್ತು ವೈದ್ಯರ ಚೀಟಿ (Prescription) ಅಡಿಯಲ್ಲಿ ತರಲಾಗಿದೆ.
ತಿದ್ದುಪಡಿಯ ಪ್ರಮುಖ ಅಂಶಗಳು: ಇದುವರೆಗೆ ‘ಷೆಡ್ಯೂಲ್ ಕೆ’ (Schedule K) ಅಡಿಯಲ್ಲಿ ಕೆಲವು ಅಲ್ಕೋಹಾಲ್ ಆಧಾರಿತ ಔಷಧಿಗಳ ತಯಾರಿಕೆಗೆ ನೀಡಲಾಗಿದ್ದ ವಿನಾಯಿತಿಯನ್ನು ಸರ್ಕಾರ ರದ್ದುಗೊಳಿಸಿದೆ. ಹೊಸ ನಿಯಮದ ಪ್ರಕಾರ, 30 ಮಿಲಿಗಿಂತ ಹೆಚ್ಚಿನ ಪ್ರಮಾಣದ ಹಾಗೂ ಶೇಕಡಾ 12 ಕ್ಕಿಂತ ಹೆಚ್ಚು ಇಥೈಲ್ ಅಲ್ಕೋಹಾಲ್ ಹೊಂದಿರುವ ಯಾವುದೇ ಔಷಧೀಯ ಉತ್ಪನ್ನಗಳು ಇನ್ನು ಮುಂದೆ ‘ಷೆಡ್ಯೂಲ್ ಎಚ್1’ (Schedule H1) ಅಡಿಯಲ್ಲಿ ಬರಲಿವೆ. ಅಂದರೆ, ಇವುಗಳನ್ನು ಔಷಧಾಲಯಗಳು (Pharmacies) ನೋಂದಾಯಿತ ವೈದ್ಯರ ಲಿಖಿತ ಚೀಟಿ ಇಲ್ಲದೆ ಮಾರಾಟ ಮಾಡುವಂತಿಲ್ಲ ಮತ್ತು ಇವುಗಳ ಮಾರಾಟದ ದಾಖಲೆಯನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ.
ದುರುಪಯೋಗಕ್ಕೆ ಬ್ರೇಕ್: ಕೆಲವು ಕಫ ಸಿರಪ್ಗಳು ಹಾಗೂ ಇತರೆ ಔಷಧಿಗಳಲ್ಲಿ ಶೇಕಡಾ 80 ರಿಂದ 90 ರಷ್ಟು ಇಥೈಲ್ ಅಲ್ಕೋಹಾಲ್ ಬಳಸಿ, ಅವುಗಳನ್ನು ಅಮಲಿಗಾಗಿ ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ದೂರು ನೀಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ‘ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ ರ ಅಡಿಯಲ್ಲಿ ಈ ಹೊಸ ನಿಯಂತ್ರಣವನ್ನು ತಂದಿದೆ. ಇದು ಆಯುರ್ವೇದ, ಸಿದ್ಧ ಮತ್ತು ಯುನಾನಿ (ಗರಿಷ್ಠ ಶೇ. 16 ಅಲ್ಕೋಹಾಲ್) ಹಾಗೂ ಹೋಮಿಯೋಪತಿ (ಗರಿಷ್ಠ ಶೇ. 12 ಅಲ್ಕೋಹಾಲ್) ನಿಯಮಾವಳಿಗಳಿಗೆ ಪೂರಕವಾಗಿರಲಿದೆ.
ಅನುಷ್ಠಾನ ಯಾವಾಗ? ಈ ಹೊಸ ತಿದ್ದುಪಡಿ ನಿಯಮಗಳು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ಆರು ತಿಂಗಳ ನಂತರ ಜಾರಿಗೆ ಬರಲಿವೆ. ಅಂದರೆ ಜನವರಿ 2027 ರಿಂದ ದೇಶಾದ್ಯಂತ ಈ ಕಠಿಣ ನಿಯಮಗಳು ಅನುಷ್ಠಾನಗೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ.
