ಜೀವನದ ಪಯಣದಲ್ಲಿ ಕೆಲವು ಕ್ಷಣಗಳು ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡುತ್ತವೆ, ಆದರೆ ಅದೇ ಹೊತ್ತಿನಲ್ಲಿ ಮತ್ತೂ ಕೆಲವು ದೃಶ್ಯಗಳು ನಮಗೇ ಅರಿಯದಂತೆ ಒಳಗಣ್ಣನ್ನು ಒದ್ದೆ ಮಾಡುತ್ತವೆ. ಏಪ್ರಿಲ್ 24ರ ಆ ಶುಭ ಮುಹೂರ್ತ ನಮ್ಮೂರಿನ ಪಾಲಿಗೆ ಅಕ್ಷರಶಃ ಒಂದು ಹಬ್ಬವೇ ಆಗಿತ್ತು. ಅಕ್ಕಿಹೆಬ್ಬಾಳು-ಹೊಸದಡದಹಳ್ಳಿ ಗ್ರಾಮದ ಧೂಳಿನ ಹಾದಿಯಲ್ಲಿ ಅಂದು ಭಕ್ತಿಯ ಅಲೆಗಳು ಮೇಳೈಸಿದ್ದವು. ವರ್ಷಗಳಿಂದ ಶಿಥಿಲಗೊಂಡು ಮೌನಕ್ಕೆ ಶರಣಾಗಿದ್ದ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನವು ಗ್ರಾಮಸ್ಥರೆಲ್ಲರ ಬೆವರ ಹನಿ ಮತ್ತು ಭಕ್ತಿಯ ಕಾಣಿಕೆಯಿಂದ ಪುನರುತ್ಥಾನಗೊಂಡು ದಿವ್ಯವಾಗಿ ಕಂಗೊಳಿಸುತ್ತಿತ್ತು. ಗೋಪುರದ ಮೇಲೆ ಹೊಳೆಯುತ್ತಿದ್ದ ಕಳಶ, ಕಣ್ಣು ಕುಕ್ಕುವ ಬಣ್ಣದ ಅಲಂಕಾರ ಮತ್ತು ಊರಿನ ತುಂಬೆಲ್ಲಾ ಮೊಳಗುತ್ತಿದ್ದ ಮಂಗಳವಾದ್ಯಗಳು ಗ್ರಾಮದ ಒಗ್ಗಟ್ಟಿನ ವಿಜಯೋತ್ಸವವನ್ನು ಸಾರುತ್ತಿದ್ದವು. ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು; ಕಲ್ಲಿನ ಗುಡಿಯನ್ನು ದೇವಲೋಕದಂತೆ ಸಿಂಗರಿಸಿದ ಆ ಜನರ ಉತ್ಸಾಹ ಕಂಡಾಗ, ನನ್ನೂರಿನ ಜನರೇ ಇದಕ್ಕೆ ಕಾರಣರಲ್ಲವೇ ಎಂಬ ಹೆಮ್ಮೆ ನನ್ನ ಹೃದಯದಲ್ಲಿ ಮೈದುಂಬಿತ್ತು. ಆದರೆ ಅದೇ ಸಂಭ್ರಮದ ಮರೆಯಲ್ಲಿ, ಹಳ್ಳಿಯ ಮತ್ತೊಂದು ಮಗ್ಗುಲಲ್ಲಿ ಕತ್ತಲೆ ಆವರಿಸುತ್ತಿದೆ ಎಂಬ ಕಟು ಸತ್ಯ ನನ್ನನ್ನು ಅಕ್ಷರಶಃ ದಹಿಸತೊಡಗಿತು.
ದೇವಸ್ಥಾನದ ಸಂಭ್ರಮದ ಅಲೆಗಳು ತಣ್ಣಗಾಗುತ್ತಿದ್ದಂತೆ ನನ್ನ ದೃಷ್ಟಿ ಹಳ್ಳಿಯ ಬೀದಿಯ ತುದಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯತ್ತ ಹೊರಳಿತು. ಅದು ಕೇವಲ ಒಂದು ಕಟ್ಟಡವಲ್ಲ; ನಾನು ಅ ಆ ಇ ಈ ಕಲಿತ ಪುಣ್ಯಭೂಮಿ, ನನ್ನ ವ್ಯಕ್ತಿತ್ವಕ್ಕೆ ಮೊದಲ ರೂಪು ಕೊಟ್ಟ ಅಕ್ಷರದ ಗುಡಿ. ಇಂದು ಆ ಶಾಲೆಯ ಸ್ಥಿತಿ ದಯನೀಯವಾಗಿದೆ. ವಿಪರ್ಯಾಸವೆಂದರೆ, ಯಾವ ಕೈಗಳು ದೇವಸ್ಥಾನದ ಕಲ್ಲು ಕಲ್ಲನ್ನೂ ಭಕ್ತಿಯಿಂದ ಕೆತ್ತಿ ಶೃಂಗರಿಸಿದವೋ, ಅದೇ ಕೈಗಳು ಅಕ್ಷರ ಕಲಿಸುವ ಶಾಲೆಯ ಗೋಡೆಗಳು ಬಿರುಕು ಬಿಡುತ್ತಿದ್ದರೂ ಅತ್ತ ತಿರುಗಿ ನೋಡುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ; ಮಕ್ಕಳ ಕಲರವದ ಬದಲು ಅಲ್ಲಿನ ಆವರಣದಲ್ಲಿ ಈಗ ಅನಾಥ ಪ್ರಜ್ಞೆಯ ಮೌನ ಮನೆಮಾಡಿದೆ.
ಅಲ್ಲಿನ ಶಾಲಾ ಶಿಕ್ಷಕರ ಪಾಡಂತೂ ಹೇಳತೀರದು. ಅವರು ಕೇವಲ ಪಾಠ ಮಾಡುವ ಕೆಲಸಕ್ಕೆ ಸೀಮಿತವಾಗಿಲ್ಲ; ಬದಲಾಗಿ ಊರಿನ ಶಾಲೆ ಅಳಿದು ಹೋಗಬಾರದು ಎಂಬ ಹಠಕ್ಕೆ ಬಿದ್ದು ಪ್ರತಿ ನಿತ್ಯವೂ ಜನರ ದಾರಿಯನ್ನು ಕಾಯುತ್ತಿದ್ದಾರೆ. ಶಾಲಾ ಶಿಕ್ಷಕರು ಗ್ರಾಮಸ್ಥರ ಬಳಿ ಹೋಗಿ, “ಬನ್ನಿ, ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸೋಣ” ಎಂದು ಹತ್ತಾರು ಬಾರಿ ಸಭೆ ಕರೆದಿದ್ದಾರೆ. ಆದರೆ ದೇವಸ್ಥಾನಕ್ಕೆ ಧಾವಿಸಿ ಬರುವ ಗ್ರಾಮದ ಮುಖಂಡರಾಗಲಿ ಅಥವಾ ಪೋಷಕರಾಗಲಿ, ಶಾಲೆಯ ಸಭೆ ಅಂದ ಕೂಡಲೇ ಮೌನಕ್ಕೆ ಶರಣಾಗುತ್ತಾರೆ.
ನಾನು ಅದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ, ನನ್ನ ಗುರುಗಳ ಸಂಕಟವನ್ನು ನೋಡಲಾರದೆ ಪದೇ ಪದೇ ಶಾಲೆಯತ್ತ ಸುಳಿಯುತ್ತೇನೆ. ಅಲ್ಲಿನ ಹಳೆಯ ಬೆಂಚುಗಳು, ಕಿಟಕಿಗಳು ನನ್ನ ಬಾಲ್ಯದ ನೆನಪುಗಳನ್ನು ಮರುಕಳಿಸುತ್ತವೆ. ಶಾಲಾ ಶಿಕ್ಷಕರು ಇಂದಿಗೂ ಹಳ್ಳಿ ಹಳ್ಳಿಗೂ ಅಲೆದು, ರಾಷ್ಟ್ರೀಯ ಹಬ್ಬಗಳಿರಲಿ ಅಥವಾ ಶಾಲಾ ವಾರ್ಷಿಕೋತ್ಸವವಿರಲಿ, ಮನೆ ಮನೆಗೂ ಹೋಗಿ ಆಹ್ವಾನ ಪತ್ರಿಕೆ ನೀಡುತ್ತಾರೆ. ನಾನು ಹಲವು ಬಾರಿ ಗ್ರಾಮಸ್ಥರನ್ನು ಹುರಿದುಂಬಿಸಿ, “ನಮ್ಮ ಶಾಲೆಯತ್ತ ಗಮನಹರಿಸಿ” ಎಂದು ಕೇಳಿಕೊಂಡಾಗಲೂ ಎಲ್ಲರೂ ತಲೆತಗ್ಗಿಸಿ ದಾಟಿ ಹೋಗುತ್ತಾರೆ. ಇತ್ತೀಚೆಗೆ ನಾನು ಶಾಲೆಯ ಕಚೇರಿಗೆ ಹೋದಾಗ, ಅಲ್ಲಿನ ಶಾಲಾ ಶಿಕ್ಷಕರು ನನ್ನನ್ನು ನೋಡಿ ತುಂಬಿದ ಕಣ್ಣುಗಳಿಂದ ಆಡಿದ ಮಾತು ನನ್ನ ಎದೆಯನ್ನು ಸೀಳಿದಂತಾಯಿತು. ಅವರು ನನ್ನ ಭುಜದ ಮೇಲೆ ಕೈಯಿಟ್ಟು: “ನೋಡು ನನ್ನ ಪ್ರೀತಿಯ ವಿದ್ಯಾರ್ಥಿಯೇ, ಇಡೀ ಊರಿಗೆ ಊರೇ ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಬಿದ್ದು ಹಳ್ಳಿಯ ಶಾಲೆಯನ್ನು ಮರೆತುಬಿಟ್ಟಿದೆ. ಆದರೆ ನೀನಾದರೂ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ, ಇಲ್ಲಿಗೆ ಏನಾಗುತ್ತಿದೆ ಎಂದು ವಿಚಾರಿಸಲು ಬರುತ್ತಿದ್ದೆಯಲ್ಲ, ಅಷ್ಟೇ ನಮಗೆ ಸಮಾಧಾನ. ನಿನ್ನನ್ನು ನೋಡಿದಾಗ ನಮಗೆ ಸ್ವಲ್ಪ ಧೈರ್ಯ ಬರುತ್ತದೆ” ಎಂದರು.
ಮುಂದುವರಿದು ಅವರು ಹೇಳಿದ ಮಾತು ಮತ್ತಷ್ಟು ಕಹಿಯಾಗಿತ್ತು: “ನೋಡು, ಇಲ್ಲಿನ ಪೋಷಕರಾಗಲಿ ಅಥವಾ ಈ ಊರನ್ನು ಮುನ್ನಡೆಸುವ ಮುಖಂಡರಾಗಲಿ ಇದುವರೆಗೂ ಶಾಲೆಯ ಅಂಗಳಕ್ಕೆ ಬಂದು ದಾಖಲಾತಿ ಬಗ್ಗೆ ವಿಚಾರಿಸಿಲ್ಲ. ನೀನೊಬ್ಬನೇ ಇಲ್ಲಿಗೆ ಬರುತ್ತಿರುವವನು” ಎಂದು ಅವರು ನಿಟ್ಟುಸಿರು ಬಿಟ್ಟಾಗ, ನಾನು ಕಲಿತ ಶಾಲೆಕ್ಕೆ ಒದಗಿದ ಈ ಸ್ಥಿತಿಯನ್ನು ಕಂಡು ಕಣ್ಣೀರು ತಡೆಯಲಾಗಲಿಲ್ಲ. ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಉದ್ಘಾಟಿಸುವುದರಲ್ಲಿ ಇದ್ದ ಆಸಕ್ತಿ, ಸರ್ಕಾರಿ ಶಾಲೆಯ ಅಭಿವೃದ್ಧಿಯ ಮೇಲೆ ಇರದಿದ್ದುದು ನನ್ನ ಜೀವನದ ಅತ್ಯಂತ ಕಹಿಯಾದ ಅನುಭವ.
ದೇವರನ್ನು ಗುಡಿಯ ಒಳಗೆ ಪ್ರತಿಷ್ಠಾಪಿಸಿದ ನಾವು, ಮಕ್ಕಳ ರೂಪದಲ್ಲಿರುವ ಅದೇ ದೇವರ ಭವಿಷ್ಯವನ್ನು ಶಾಲೆಯ ಹೊರಗೆ ತಳ್ಳುತ್ತಿದ್ದೇವೆ. ದೇವಸ್ಥಾನಕ್ಕೆ ಕೊಟ್ಟ ಸಮಯದ ಒಂದು ಸಣ್ಣ ಭಾಗವನ್ನು ಶಾಲೆಯ ಉನ್ನತಿಗಾಗಿ ಕೊಟ್ಟಿದ್ದರೆ, ಇಂದು ಈ ದಾಖಲಾತಿ ಕೊರತೆಯ ಪ್ರಶ್ನೆಯೇ ಬರುತ್ತಿರಲಿಲ್ಲ. ಕಲ್ಲಿನ ಗುಡಿಗೆ ತೋರಿದ ಆ ವಿಪರೀತ ಅಕ್ಕರೆ, ಅರಿವು ಮೂಡಿಸುವ ಅಕ್ಷರದ ಗುಡಿಗೆ ಯಾಕಿಲ್ಲ? ಈ ಕಹಿಯಾದ ಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕಿದೆ. ನಮ್ಮ ಹಳ್ಳಿಯ ಶಾಲೆಯ ದೀಪ ಆರಿಹೋದರೆ, ಆ ಪಾಪದ ಹೊಣೆ ಇಡೀ ಗ್ರಾಮಸ್ಥರದ್ದಾಗಿರುತ್ತದೆ.
–ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605
