ಬೆಂಗಳೂರು: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅದು ಜಾತಿ, ಮತ, ಧರ್ಮಗಳನ್ನು ಮೀರಿದ್ದು. ಪಂಪನ ಕಾಲದಿಂದ ಕುವೆಂಪು ಅವರ ನಂತರದ ಕಾಲಘಟ್ಟದವರೆಗೂ ಜಾತೀಯತೆ ವಿವಿಧ ರೂಪಗಳಲ್ಲಿ ಮುಂದುವರಿಯುತ್ತಿರುವುದು ವಿಷಾದನೀಯ ಎಂದು ಸಾಹಿತಿ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಹೇಳಿದರು.

ಬೆಂಗಳೂರಿನ ವಿಜಯನಗರದ ರೂಪಾಲಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕವಿ, ಚಿಂತಕ ಕನಕಪುರದ ಜಿ. ಆನಂದ್ ಕುಮಾರ್ ಅವರ ಚೊಚ್ಚಲ ಕವನ ಸಂಕಲನ ‘ಕರುನಾಡ ಕಂದ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿಯೂ ಜಾತೀಯತೆ ತಾಂಡವವಾಡುತ್ತಿರುವುದು ಬೇಸರದ ಸಂಗತಿ. ಇಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಲಯಗಳಲ್ಲಿ ಜಾತಿಯ ವಿಷಬೀಜ ವ್ಯಾಪಿಸುತ್ತಿದ್ದು, ಇದು ಸಮಸಮಾಜದ ಕನಸು ಕಂಡ ಬಸವಣ್ಣ, ಕನಕದಾಸ, ಪುರಂದರದಾಸ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕುವೆಂಪು ಅವರಂತಹ ಮಹನೀಯರ ತತ್ವ-ಸಿದ್ಧಾಂತಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.

ಬಸವಣ್ಣ, ಕನಕ, ಪುರಂದರ ಹಾಗೂ ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ತಮ್ಮ ಬದುಕು ಮತ್ತು ಬರಹಗಳ ಮೂಲಕ ಜಾತ್ಯತೀತ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದರು. ಆದರೆ ಇಂದು ಅವರನ್ನೇ ದೇವರು, ಧರ್ಮ ಹಾಗೂ ವಿವಿಧ ಲಾಂಛನಗಳ ಹೆಸರಿನಲ್ಲಿ ಸೀಮಿತಗೊಳಿಸಿರುವುದು ನೋವಿನ ಸಂಗತಿ ಎಂದರು.

ಸಾಹಿತ್ಯವು ಜಾತಿ ವ್ಯವಸ್ಥೆಯನ್ನು ಮೀರಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಸಾರಿದ ಪಂಪ ಹಾಗೂ **‘ಮನುಜ ಮತ, ವಿಶ್ವಪಥ, ಸರ್ವೋದಯ’**ದ ಸಂದೇಶ ನೀಡಿದ ಕುವೆಂಪು ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಪ್ರೊ. ಡಾ. ಸಿಸಿರಾ ಹೇಳಿದರು.

ಕಾರ್ಯಕ್ರಮವನ್ನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ವೀಣಾ ಎನ್. ವಿನೋದ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಯುವಜನರಿಗೆ ಆದರ್ಶ, ಉದ್ಯೋಗ ಮತ್ತು ಉತ್ತಮ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಕಲ್ಪಿಸಬೇಕು ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ದಾಸ ಸಾಹಿತ್ಯ ಸಂಶೋಧಕರು ಹಾಗೂ ವಿಜಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್. ವಾದಿರಾಜು ವಹಿಸಿದ್ದರು. ಆನಂದ್ ಕುಮಾರ್ ಅವರು ಯಾವುದೇ ವಿಶೇಷ ಸಹಾಯ, ಸಹಕಾರ ಅಥವಾ ಪ್ರೋತ್ಸಾಹವಿಲ್ಲದೆ ಸ್ವಪ್ರಯತ್ನದಿಂದ ಬೆಳೆದು, ತಮ್ಮ ಕವನಗಳ ಮೂಲಕ ಶಾಲಾ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನಸ್ಸು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೂ.ಗಿ. ಗಿರಿಯಪ್ಪ ಅವರು ‘ಕರುನಾಡ ಕಂದ’ ಕೃತಿಯ ವೈಶಿಷ್ಟ್ಯಗಳು ಹಾಗೂ ನ್ಯೂನತೆಗಳ ಕುರಿತು ಮಾತನಾಡಿದರು. ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಶ್ರೀ ಶ್ರೀ ಪ್ರಕಾಶ್ ಯೋಗಿ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಧ್ಯಾತ್ಮಿಕ ಹಾಗೂ ಲೌಕಿಕ ಬದುಕಿನಲ್ಲಿರುವ ನಿಗೂಢ ಮಾನವ ಸಂಬಂಧಗಳ ಕುರಿತು ವಿವರಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಭುಸ್ವಾಮಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಅಶೋಕ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಕೃತಿಕಾರ ಜಿ. ಆನಂದ್ ಕುಮಾರ್ ಅವರು ತಮ್ಮ ಸಾಹಿತ್ಯ ಮತ್ತು ಜೀವನದ ಬೆಳವಣಿಗೆಗೆ ಕಾರಣರಾದ ತಂದೆ, ತಾಯಿ ಹಾಗೂ ಗುರುಗಳನ್ನು ಸ್ಮರಿಸಿದರು. ಶ್ರೀಮತಿ ದಿವ್ಯ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪಲ್ಲವಿ ಸ್ವಾಗತಿಸಿ ವಂದಿಸಿದರು.
