ಶ್ಲೋಕ – 12
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್ ।
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ ತೇಜೋ ವಿದ್ಧಿ ಮಾಮಕಮ್ ॥೧೨॥
ಯತ್ ಆದಿತ್ಯಗತಮ್ ತೇಜಃ ಜಗತ್ ಭಾಸಯತೇ ಅಖಿಲಮ್ ।
ಯತ್ ಚಂದ್ರಮ್ ಅಸಿ ಯತ್ ಚ ಅಗ್ನೌ ತತ್ ತೇಜಃ ವಿದ್ಧಿ ಮಾಮಕಮ್ –ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೆ ಬೆಳಕೆಂದು ತಿಳಿ.
ಹಿಂದೆ-ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ನನ್ನನ್ನು ಬೆಳಗಿಸುವುದಿಲ್ಲ ಎಂದಿದ್ದ ಕೃಷ್ಣ, ಇಲ್ಲಿ ಸೂರ್ಯ ಬೆಳಗುವುದು, ಚಂದ್ರ ಬೆಳಗುವುದು, ಅಗ್ನಿ ಬೆಳಗುವುದು -ಎಲ್ಲವೂ ನನ್ನಿಂದ ಎನ್ನುತ್ತಾನೆ. ಎಲ್ಲಾ ಬೆಳಕಿನ ಮೂಲ ಬೆಳಕು ಭಗವಂತ. ಬೆಳಕಿನ ಮೂಲಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರ, ಮಿಂಚು, ವಿದ್ಯುತ್ ಹಾಗು ಅಗ್ನಿ. ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನು ಕೊಡುವನು ಆ ಭಗವಂತ. ಅಂದರೆ “ಸೂರ್ಯನಿಂದ ಹಿಡಿದು, ಚಂದ್ರ ತಾರೆಗಳಾಗಲಿ, ಆಕಾಶದಲ್ಲಿ ಬೆಳಗುವ ಮಿಂಚಿರಲಿ, ಅಥವಾ ಉರಿಯುವ ಅಗ್ನಿಯಾಗಲಿ, ಈ ಎಲ್ಲಾ ಬೆಳಕಿನ ಪುಂಜಗಳು ಬೆಳಗುವುದು ಭಗವಂತನೆಂಬ ಮೂಲ ಬೆಳಕಿನಿಂದ. ಯಾವ ಬೆಳಕು ನಮ್ಮ ಸ್ವರೂಪದೊಳಗೆ ಅಣೋರಣೀಯವಾಗಿ ನಿಂತು ನಮ್ಮನ್ನು ನಡೆಸುತ್ತಿದೆಯೋ, ಅದೇ ಬೆಳಕು ಮಹತೋಮಹಿಯಾಗಿ ಇಡೀ ಬ್ರಹ್ಮಾಂಡವನ್ನು ಬೆಳಗಿಸುತ್ತಿದೆ. ಒಟ್ಟಿನಲ್ಲಿ ಎಲ್ಲ ಬೆಳಕುಗಳ ಮೂಲ ತೇಜಸ್ಸು ಆ ಭಗವಂತ. ಉಪನಿಷತ್ಕಾರರು ಇಂಥಹ ಮಹಾ ಬೆಳಕಿನ ಬಗ್ಗೆ ವಿವರಿಸುತ್ತ ಹೇಳುತ್ತಾರೆ: “..ಯದೇತದ್ ವಿದ್ಯುತೋ ವ್ಯದ್ಯುತದಾ ಇತಿ..” ಎಂದು (ಕೇನ-೪.೪). ಅವರು ಇಲ್ಲಿ ಈ ಬೆಳಕನ್ನು ‘ಆ-ಇತಿ’ ಎನ್ನುತ್ತಾರೆ. ಅಂದರೆ ಇದೊಂದು ‘ವಿಸ್ಮಯ’ ಎಂದರ್ಥ. ತಿಳಿಯುವ ತನಕ ಆಶ್ಚರ್ಯ, ತಿಳಿದ ಮೇಲೆ ಆನಂದ.
ಉಪಾಸನೆಯ ದೃಷ್ಟಿಯಲ್ಲಿ ಈ ಶ್ಲೋಕವನ್ನು ನೋಡಿದರೆ: ಸೂರ್ಯನಲ್ಲಿರುವ ತೇಜಸ್ಸು-ನಾರಾಯಣನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು-ಧನ್ವಂತರಿಯ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು-ಪರಶುರಾಮನ ತೇಜಸ್ಸು. ಹೀಗೆ ಪ್ರತಿಯೊಂದು ಬೆಳಕಿನ ಮೂಲ ಬೆಳಕು ಭಗವಂತ ಎಂದು ನಾವು ಈ ಶ್ಲೋಕದಿಂದ ಉಪಾಸನೆ ಮಾಡಬಹುದು.
