ತುಮಕೂರು: ನಗರದ ಸೋಮೆಕಟ್ಟೆ ಮಠದಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ 9ನೇ ವರ್ಷದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಈ ತಿಂಗಳ 26ರಂದು ಶನಿವಾರ ವಿಜೃಂಭಣೆಯಿಂದ ನಡೆಯಲಿದೆ.
ಗಣೇಶೋತ್ಸವದ ಸ್ವಾಗತ ಸಮಿತಿಅಧ್ಯಕ್ಷ ಡಾ.ಲಕ್ಷ್ಮೀಕಾಂತ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಈ ಬಾರಿ ನಗರದ ವಿವಿಧಗಣಪತಿ ಮಂಡಳಿಗಳ 20ಕ್ಕೂ ಹೆಚ್ಚು ಗಣಪತಿಗಳು,ಆಯಾ ಸಮಿತಿ ಪದಾಧಿಕಾರಿಗಳು ಹಾಗೂ ಅಲ್ಲಿನ ಭಕ್ತಬಳಗವು 26ರಂದು ನಡೆಯುವ ಮಹಾ ಗಣಪತಿ ಯಶೋಭಾಯಾತ್ರೆಯಲ್ಲಿ ಜೊತೆಗೂಡಲಿದ್ದು ವೈಭವದ ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
26ರಂದು ಬೆಳಿಗ್ಗೆ 10.30ಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿಯವರುಗಣಪತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡುವರು. ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸುವರು. ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಶೋಭಾಯಾತ್ರೆ ನಗರದ ಪ್ರಮುಖರಸ್ತೆಯಲ್ಲಿ ಸಾಗಿ ಗಾರ್ಡನ್ ರಸ್ತೆಯ ಕೆಎನ್ಎಸ್ ಕಲ್ಯಾಣಿಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗುವುದು ಎಂದರು.
ಹಿಂದೂಗಳ ಪ್ರಮುಖ ಆಚರಣೆಗಳಲ್ಲೊಂದಾದ ಗಣೇಶೋತ್ಸವದ ಮೂಲಕ ಹಿಂದೂಗಳನ್ನು ಒಟ್ಟಾಗಿಸಬೇಕು ಎಂಬ ಆಶಯದಲ್ಲಿ ಈ ವರ್ಷ ವಿವಿಧ ಮಂಡಳಿಗಳ ಗಣೇಶಗಳನ್ನು ಒಟ್ಟಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ಉದ್ದೇಶಿಸಿಲಾಗಿದೆ.ಈಗಾಗಲೇ ತಮ್ಮ ಆಚರಣೆಗಳನ್ನು ಪೂರ್ಣಗೊಳಿಸಿರುವ ಗಣೇಶ ಮಂಡಳಿಯವರು ತಮ್ಮಗಣೇಶ ಮೂರ್ತಿಗಳನ್ನು ತಂದಿಟ್ಟಿದ್ದಾರೆ.ಈ ಗಣಪತಿಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ.26ರಂದು ಈ ಎಲ್ಲಾ ಗಣಪತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಗುವುದು ಎಂದು ಡಾ.ಲಕ್ಷ್ಮೀಕಾಂತ್ ತಿಳಿಸಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಜಾನಪದ ಕಲಾತಂಡಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.ಈ ಉತ್ಸವವನ್ನು ಊರಿನ ಹಬ್ಬವೆಂದು ತಿಳಿದು ನಗರದ ಹೆಚ್ಚು ಜನ ಭಾಗವಹಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿ ನಗರದರಾಜ ಬೀದಿಯಲ್ಲಿ ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ, ಆಧುನಿಕಡಿ.ಜೆ.ಸೆಟ್, ನಾಸಿಕ್ ಡೋಲು, ವಿದ್ಯುತ್ ದೀಪಾಲಂಕಾರ ಹಾಗೂ ಕಣ್ಮನತಣಿಸುವ ಬಾಣ-ಬಿರುಸುಗಳ ಮದ್ದಿನ ವೈಖರಿಯೊಂದಿಗೆ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಸ್ವಾಗತ ಸಮಿತಿ ಮುಖಂಡರಾದ ಜಿ.ಕೆ. ಶ್ರೀನಿವಾಸ್, ಟಿ.ಬಿ. ಹರೀಶ್, ವೆಂಕಟೇಶಜೋಯಿಸ್, ಸೋಮೆಕಟ್ಟೆ ಸೋಮಣ್ಣ, ಸ್ವಚ್ಛಮಂಜುನಾಥ್, ವೆಂಕಟೇಶಾಚಾರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
– ಚಂದ್ರಚೂಡ ಕೆ.ಬಿ.
