ತುಮಕೂರು: ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ಗೌಡ ಅವರು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.
ಕೊರಟಗೆರೆ ಬಿಜೆಪಿ ಮುಖಂಡ ಹಾಗೂ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಬಿಜೆಪಿ ಕೋರ್ ಕಮಿಟಿ ಸದಸ್ಯ ಬಿ.ಹೆಚ್. ಅನಿಲ್ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು ಬುಧವಾರ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ಗೌಡ ಅವರನ್ನು ಭೇಟಿ ಮಾಡಿ, ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಪದಾಧಿಕಾರಿಗಳ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯವರು, ಮಧುಗಿರಿ ಜಿಲ್ಲಾ ನೂತನ ಪದಾಧಿಕಾರಿಗಳ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಿದರು.ಜಿಲ್ಲಾ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಪಕ್ಷದ ಕಾರ್ಯಕರ್ತರು ಮತ್ತು ಸಂಘಟನೆಯ ನಡುವೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಜುಲೈ 10ರಂದು ಸಭೆ ನಡೆಸಿ,ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಜಿಲ್ಲಾ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ನಿರ್ದೇಶನ ನೀಡಿದರು ಎಂದು ಮಧುಗಿರಿ ಜಿಲ್ಲಾ ಕೋರ್ ಕಮಿಟಿ ಸದಸ್ಯ ಬಿ.ಹೆಚ್.ಅನಿಲ್ಕುಮಾರ್ ತಿಳಿಸಿದ್ದಾರೆ.
– ಕೆ.ಬಿ.ಚಂದ್ರಚೂಡ
