ತುಮಕೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರು ಹಾಗು ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ಅವರ ಜಯನಗರದಲ್ಲಿರುವ ಅವರ ಸ್ವಗೃಹಕ್ಕೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳು ಪಾದಪೂಜೆಗೆ ಆಗಮಿಸಿದ್ದರು.
ಮುರುಳೀಧರಹಾಲಪ್ಪ ಹಾಗು ಕಲ್ಪನಾ ಮುರುಳೀಧರ ಹಾಲಪ್ಪ ಅವರ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶೀಗಳು, ಮುರುಳೀಧರ ಹಾಲಪ್ಪ ಅವರಿಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಸ್ಥಾನಮಾನ ಸಿಗಲಿ ಎಂದು ಹಾರೈಸಿದರು.
ಈ ವೇಳೆ ಮಾತನಾಡಿದ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರಸ್ವಾಮೀಜಿಗಳು, ಮುರುಳೀಧರ ಹಾಲಪ್ಪ ಅವರು ಯವಕರು, ಮಹಿಳೆಯರು, ರೈತರು, ಕಾರ್ಮಿಕರು ಹಾಗು ಜನಸಾಮಾನ್ಯರ ಸೇವೆ ಮಾಡುತ್ತಾ, ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ, ಅವರು ಮಠದ ಹಳೆಯ ಭಕ್ತರು, ತಮ್ಮ ಮನೆಯ ಪಾದ ಪೂಜೆಗೆ ಬರುಬೇಕೆಂದು ಅಪೇಕ್ಷಿಸಿ ನಮ್ಮನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಿದ್ದರು, ಅವರ ಕೋರಿಕೆಯಂತೆ ಇಂದು ಅವರ ಸ್ವಗೃಹಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದ್ದೇನೆ. ಅವರು ತಮ್ಮ ರಾಜಕೀಯ ಉನ್ನತ್ತಿಗಾಗಿ ಕೆಲ ಸಂಕಲ್ಪಗಳನ್ಬು ಮಾಡಿಕೊಂಡಿದ್ದರು, ಅವರ ಸಂಕಲ್ಪಕ್ಕೆ ಗುರು ಅಜ್ಜಯ್ಯನ ಅನುಗ್ರಹವೂ ಆಗಿದೆ. ಮುಂದೆ ಉತ್ತರೋತ್ತರವಾಗಿ ಬೆಳೆಯಲಿದ್ದಾರೆ.ಅವರು ಮತ್ತು ಅವರ ಮನೆಯವರು ಮತ್ತಷ್ಟು ಜನ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಆಶೀರ್ವದಿಸಿರುವುದಾಗಿ ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರಹಾಲಪ್ಪ ಮಾತನಾಡಿ, ನೊಣವಿನಕೆರೆ ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ತಮ್ಮ ಪೂರ್ವಜರು ಕಾಡುಸಿದ್ದೇಶ್ವರ ಮಠಕ್ಕೆ ನಡೆದುಕೊಳ್ಳುತ್ತಿದ್ದರು. ಇಂದಿಗೂ ಅದು ಮುಂದುವರೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಲಹೆಯಂತೆ ನಾನು ಗುರುಗಳನ್ನು ನಮ್ಮ ಮನೆಗೆ ಪಾದಪೂಜೆಗೆ ಬರುವಂತೆ ಮಠಕ್ಕೆ ಹೋಗಿ ಅಹ್ವಾನಿಸಿದ್ದೆ. ಅವರು ಇಂದು ಆಗಮಿಸಿ, ನಮ್ಮ ಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದಾರೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕು. ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಒಳ್ಳೆಯ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಲು ಆಶೀರ್ವದಿಸುವಂತೆ ಕೇಳಿಕೊಂಡಿದ್ದೇನೆ. ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದ್ದೇನೆ.ಜನರ ಆಶೀರ್ವಾದ ಜೊತೆಗೆ, ಗುರುಗಳ ಅನುಗ್ರಹವೂ ಅಗತ್ಯವಿದೆ ಎಂದರು.
ನೂತನ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಅವರುಗಳು, ಮುಂದಿನ ಎರಡು ವರ್ಷಗಳಲ್ಲಿ ನಾಡಿನಲ್ಲಿರುವ ಬಡತನ,ನಿರುದ್ಯೋಗ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಲಿ ಎಂಬುದು ನಮ್ಮ ಒತ್ತಾಸೆಯಾಗಿದೆ,ಅಜ್ಜಯ್ಯನ ಕೃಪೆಯಿಂದ ಎಲ್ಲವೂ ಸುಸೂತ್ರವಾಗಿ ಆಗಲಿದೆ,ನಾಡಿಗೆ ಒಳಿತಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಕಲ್ಪನಾ ಮುರುಳೀಧರಹಾಲಪ್ಪ, ಡಾ.ಎಸ್.ಷಫಿಅಹಮದ್,ಅರಕೆರೆಶಂಕರ್, ಮಾಜಿ ಶಾಸಕ ಲಕ್ಕಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
