ಬೆಂಗಳೂರು: ನಗರದ ಡಬಲ್ ರಸ್ತೆಯಲ್ಲಿ ಮಧ್ಯರಾತ್ರಿ Uber ಕ್ಯಾಬ್ ಚಾಲಕರೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ Wilson Garden Police Station ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಕಾರಿನಿಂದ ಹೊರಗೆಳೆದು ಹಲ್ಲೆ
ಮಾಹಿತಿಯ ಪ್ರಕಾರ, ಉಬರ್ ಚಾಲಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡಿದ್ದ ವೇಳೆ ಮತ್ತೊಂದು ಕಾರು ಹಾಗೂ ಸ್ಕೂಟರ್ನಲ್ಲಿ ಬಂದ ಏಳೆಂಟು ಮಂದಿ ಏಕಾಏಕಿ ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ಹಲ್ಲೆ ನಡೆಸಿದ್ದಾರೆ.
ಘಟನೆಯ ವೇಳೆ ಕಾರಿನೊಳಗೆ ಮಹಿಳೆಯೊಬ್ಬರು ಕುಳಿತ್ತಿದ್ದರೆಂದು ತಿಳಿದುಬಂದಿದೆ. ದುಷ್ಕರ್ಮಿಗಳಲ್ಲೊಬ್ಬ ಕಾರಿನ ಬಾಗಿಲು ತೆರೆದು ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕ
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಚಾಲಕ ಯತ್ನಿಸಿದರೂ ಆರೋಪಿಗಳು ಬಿಡದೆ ಹಲ್ಲೆ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಪೊಲೀಸರು ತನಿಖೆ ಆರಂಭ
ಘಟನೆ ಸಂಬಂಧ ಇದುವರೆಗೆ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ.ಎಚ್. ರಸ್ತೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ವಾಹನ ಹಾಗೂ ಸಂತ್ರಸ್ತರ ವಾಹನದ ನೋಂದಣಿ ಸಂಖ್ಯೆಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಸಾರ್ವಜನಿಕರಲ್ಲಿ ಆತಂಕ
ನಗರದಲ್ಲಿ ಮಧ್ಯರಾತ್ರಿ ಕ್ಯಾಬ್ ಚಾಲಕರ ಮೇಲೆ ನಡೆದ ಹಲ್ಲೆ ಘಟನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
