ರಾಮನಾಥಪುರ, ಆ.3: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಆರ್ಐ) ಅಂಗವಾಗಿ ರಾಮನಾಥಪುರ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಜಾಥಾ ನಡೆಸಿ, ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರು ತಮ್ಮ ಹೆಸರನ್ನು ಪರಿಶೀಲಿಸಿ ಸೇರ್ಪಡೆ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜಾಥಾಕ್ಕೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪಿ. ಶ್ರೀನಿವಾಸ್ ನೇತೃತ್ವ ವಹಿಸಿ ಮಾತನಾಡಿ, ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದಾಗಿದೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬೂತ್ ಮಟ್ಟದ ಅಧಿಕಾರಿಗಳು (BLO) ನೀಡುವ ಅಗತ್ಯ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಅಪ್ಲೋಡ್ ಮಾಡಲು ಬೂತ್ ಮಟ್ಟದ ಅಧಿಕಾರಿಗಳ ನೆರವು ಪಡೆಯಬಹುದು ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ಪಡೆಯುವಂತೆ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ಲಾನಿಂಗ್ ಅಧಿಕಾರಿ ಧರ್ಮೇಂದ್ರ, ನರೇಗಾ ವ್ಯವಸ್ಥಾಪಕ ಪ್ರದೀಪ್, ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ವಿರೂಪಾಕ್ಷ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಕಾರ್ಯದರ್ಶಿ ರೇವಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
