ರಾಮನಾಥಪುರ, ಜೂ. 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮನಾಥಪುರದಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಭೈಫ್ ಸಂಸ್ಥೆ ಹಾಗೂ ಕಾವೇರಿ ನದಿ ಅಂದೋಲನ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗಿಡ ನೆಡುವಿಕೆ ಮತ್ತು ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿ ದಂಡೆಯಲ್ಲಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪರಿಸರ ಸಂರಕ್ಷಣೆ ಮತ್ತು ನದಿ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಎಸ್. ಸರ್ವಮಂಗಳ ಮಾತನಾಡಿ, ಪ್ರತಿಯೊಬ್ಬರೂ ಸಮಾಜದ ಹಿತದೃಷ್ಟಿಯಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಶಾಲಾ-ಕಾಲೇಜುಗಳ ಆವರಣದಲ್ಲಿ ನೂರಾರು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಇದರಿಂದ ಪರಿಸರ ಹಸನಾಗಿ ಹಾಗೂ ಸ್ವಚ್ಛವಾಗಿ ಕಾಣುತ್ತದೆ ಎಂದು ತಿಳಿಸಿದರು.

ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಕೊಡಗಿನ ತಲಕಾವೇರಿಯಿಂದ ತಮಿಳುನಾಡುವರೆಗೆ ಹರಿಯುವ ಕಾವೇರಿ ನದಿ ಸಂರಕ್ಷಣೆಗಾಗಿ ವಿಶೇಷ ಕಾಯ್ದೆ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಕಾವೇರಿ ನದಿ ರಕ್ಷಣೆಗೆ ಸಾಧು-ಸಂತರು ಹಾಗೂ ವಿವಿಧ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ನದಿಯ ಸ್ವಚ್ಛತೆ ಮತ್ತು ಸಂರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಭೈಫ್ ಸಂಸ್ಥೆಯ ಯೋಜನಾ ಸಂಯೋಜಕರಾದ ಗಿರೀಶ್ ಶಂಕರಪ್ಪ, ನವೀನ್, ಕಾವೇರಿ ನದಿ ಸ್ವಚ್ಛತಾ ಸಮಿತಿ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಆರ್.ಕೆ. ಶ್ರೀನಿವಾಸ್, ಐ.ಬಿ. ಕುಮಾರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
