ಬೀಜಿಂಗ್: ಆಫ್ರಿಕಾ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಚೀನಾ ಮೇ 1, 2026ರಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬೀಜಿಂಗ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ 53 ಆಫ್ರಿಕಾ ರಾಷ್ಟ್ರಗಳಿಗೆ ಶೂನ್ಯ ಸುಂಕ ಸೌಲಭ್ಯ ಘೋಷಿಸಿದೆ.
ಈ ಯೋಜನೆಯಡಿ ಈಗಾಗಲೇ ಅತಿ ಹಿಂದುಳಿದ 33 ದೇಶಗಳಿಗೆ ನೀಡಲಾಗುತ್ತಿದ್ದ ಸೌಲಭ್ಯವನ್ನು ವಿಸ್ತರಿಸಿ, ಉಳಿದ 20 ರಾಷ್ಟ್ರಗಳಿಗೂ 2026ರಿಂದ 2028ರವರೆಗೆ ಆದ್ಯತೆಯ ಸುಂಕ ರಿಯಾಯಿತಿ ನೀಡಲಾಗುತ್ತದೆ.
ಟ್ಯಾರಿಫ್ ಕೋಟಾ ವ್ಯಾಪ್ತಿಯ ಉತ್ಪನ್ನಗಳಿಗೆ ಮಾತ್ರ ಇನ್-ಕೋಟಾ ಸುಂಕವನ್ನು ಶೂನ್ಯಗೊಳಿಸಲಾಗಿದ್ದು, ಔಟ್-ಕೋಟಾ ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಮೂಲಕ ನಿಯಂತ್ರಿತ ಆಮದು ವ್ಯವಸ್ಥೆ ಮುಂದುವರಿಯಲಿದೆ.
ಚೀನಾ-ಆಫ್ರಿಕಾ ಆರ್ಥಿಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು, ಕೃಷಿ ಉತ್ಪನ್ನಗಳ ರಫ್ತು ಸುಗಮಗೊಳಿಸುವ ‘ಗ್ರೀನ್ ಚಾನೆಲ್’ ವ್ಯವಸ್ಥೆ ಸೇರಿದಂತೆ ವಿವಿಧ ವ್ಯಾಪಾರ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
2025ರಲ್ಲಿ ಚೀನಾ-ಆಫ್ರಿಕಾ ನಡುವಿನ ಒಟ್ಟು ವ್ಯಾಪಾರ ಮೌಲ್ಯ 348 ಬಿಲಿಯನ್ ಡಾಲರ್ ತಲುಪಿದ್ದು, ಈ ಹೊಸ ನೀತಿಯಿಂದ ಆರ್ಥಿಕ ಸಂಬಂಧಗಳು ಇನ್ನಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.
