ರಾಮನಾಥಪುರ: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಅರ್ಧನಾರೀಶ್ವರಸ್ವಾಮಿ ದೇವಾಲಯದ ಆವರಣದಲ್ಲಿ 157ನೇ ಹುಣ್ಣಿಮೆ ಅಂಗವಾಗಿ ಸ್ವಚ್ಛತಾ ಕಾರ್ಯ ಹಾಗೂ ಕಾವೇರಿ ಮಹಾ ಆರತಿ ಕಾರ್ಯಕ್ರಮ ಶನಿವಾರ ನಡೆಯಿತು.
ಕಳೆದ ತಿಂಗಳು ಕಾವೇರಿ ನದಿ ತುಂಬಿ ಹರಿದ ಸಂದರ್ಭದಲ್ಲಿ ನದಿ ಒಳಾಂಗಣದಲ್ಲಿರುವ ದೇವಾಲಯದ ಸುತ್ತಮುತ್ತ ಹೂಳು ತುಂಬಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ದೇವಾಲಯದ ಆವರಣ ಮತ್ತು ನದಿ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಬಳಿಕ ಕಾವೇರಿ ನದಿಗೆ ಮಹಾ ಆರತಿ ನೆರವೇರಿಸಲಾಯಿತು.
ಕಾರ್ಯಕ್ರಮದ ಬಳಿಕ ಮಾತನಾಡಿದ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಕೊರತೆ, ಮಳೆಯ ಅನಿಶ್ಚಿತತೆ, ಬೆಳೆಗಳ ಭವಿಷ್ಯದ ಆತಂಕ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಇಲ್ಲಿನ ರೈತರಿಗೆ ಅನಾನುಕೂಲವಾಗಲಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಜಲಾಶಯಗಳಲ್ಲಿನ ಸಂಗ್ರಹ, ಒಳಹರಿವು, ಮುಂದಿನ ದಿನಗಳ ಮಳೆಯ ಮುನ್ಸೂಚನೆ ಹಾಗೂ ಕರ್ನಾಟಕದ ಕುಡಿಯುವ ನೀರಿನ ಅಗತ್ಯಗಳನ್ನು ಸಮಗ್ರವಾಗಿ ಪರಿಗಣಿಸದೆ ನಿರಂತರವಾಗಿ ನೀರು ಬಿಡುಗಡೆ ಮಾಡುವಂತೆ ಸೂಚಿಸುವುದು ನ್ಯಾಯಸಮ್ಮತವಲ್ಲ ಎಂದು ಅವರು ತಿಳಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ಮಾತನಾಡಿ, ಈ ಭಾಗದ ರೈತರಿಗೆ ಕಾವೇರಿ ಕೇವಲ ನದಿಯಲ್ಲ, ಬದುಕಿನ ಉಸಿರು. ಸಾವಿರಾರು ಕುಟುಂಬಗಳು ಕಾವೇರಿ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿದ್ದು, ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ನದಿಯ ನೀರಿನ ಮೇಲೆ ಅವಲಂಬಿತವಾಗಿವೆ ಎಂದರು.
ಮಳೆ ಕೊರತೆ ಅಥವಾ ಒಳಹರಿವು ಕಡಿಮೆಯಾಗಿರುವ ಸಂಕಷ್ಟದ ಸಂದರ್ಭದಲ್ಲಿ ಲಭ್ಯವಿರುವ ನೀರನ್ನು ಎರಡೂ ರಾಜ್ಯಗಳ ಅಗತ್ಯಗಳಿಗೆ ಅನುಗುಣವಾಗಿ ನ್ಯಾಯಯುತವಾಗಿ ಹಂಚಿಕೊಳ್ಳುವ ಸಂಕಷ್ಟ ಹಂಚಿಕೆ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮನವಿ ಮಾಡಿದರು.

ಸಮಿತಿ ಉಪಾಧ್ಯಕ್ಷ ಆರ್.ಕೆ. ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆದೇಶ ಹೊರಡಿಸುವುದರ ಜೊತೆಗೆ ಕರ್ನಾಟಕದ ನೆಲದ ವಾಸ್ತವ ಪರಿಸ್ಥಿತಿಯನ್ನೂ ಪರಿಶೀಲಿಸಬೇಕು. ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಒಳಹರಿವು, ಕುಡಿಯುವ ನೀರಿನ ಅಗತ್ಯ, ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆ ಪರಿಸ್ಥಿತಿ ಹಾಗೂ ಮುಂದಿನ ದಿನಗಳ ಮಳೆಯ ಸಾಧ್ಯತೆ ಸೇರಿದಂತೆ ಎಲ್ಲ ಅಂಶಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳ ರೈತರ ಹಿತವನ್ನು ಕಾಪಾಡುವ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮಳೆ, ಒಳಹರಿವು ಮತ್ತು ಜಲಾಶಯಗಳ ಸಂಗ್ರಹದ ಆಧಾರದ ಮೇಲೆ ಪಾರದರ್ಶಕ ಹಾಗೂ ವೈಜ್ಞಾನಿಕ ವ್ಯವಸ್ಥೆ ರೂಪಿಸಬೇಕು. ಕಾವೇರಿ ವಿಚಾರದಲ್ಲಿ ಕರ್ನಾಟಕದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದರೆ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

“ಕಾವೇರಿ ಉಳಿದರೆ ರೈತ ಉಳಿಯುತ್ತಾನೆ; ರೈತ ಉಳಿದರೆ ನಾಡು ಉಳಿಯುತ್ತದೆ,” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಉಪಾಧ್ಯಕ್ಷ ಆರ್.ಕೆ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಭಾಗ್ಯಮ್ಮ, ಅರುದಂತಿ, ರಮ್ಯ ಡಿ. ಸೇರಿದಂತೆ ಹಲವರು ಸ್ವಚ್ಛತಾ ಕಾರ್ಯ ಹಾಗೂ ಕಾವೇರಿ ಮಹಾ ಆರತಿ ಪೂಜೆಯಲ್ಲಿ ಭಾಗವಹಿಸಿದ್ದರು.
