ರಾಮನಾಥಪುರ, ಅ.27: ಇಲ್ಲಿನ ಕಾವೇರಿ ನದಿ ತಟದ ವಹ್ನಿ ಪುಷ್ಕರಣಿಯಲ್ಲಿ 157ನೇ ಹುಣ್ಣಿಮೆ ಕಾವೇರಿ ಮಹಾಆರತಿ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾವೇರಿ ನದಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಾಧು-ಸಂತರ ಹಾಗೂ ವಿವಿಧ ಸಂಘಟನೆಗಳ ಕಾರ್ಯವನ್ನು ಶ್ಲಾಘಿಸಿದರು.
ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿ ಸಂಘ, ಕೊಡಗು ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎ. ಮಂಜು, ತಲಕಾವೇರಿಯಿಂದ ಆರಂಭವಾಗಿ ಭಾಗಮಂಡಲ, ಮಡಿಕೇರಿ, ಕುಶಾಲನಗರ, ರಾಮನಾಥಪುರ, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ತಮಿಳುನಾಡಿನ ಪೂಂಪುಹಾರ್ವರೆಗೆ ಹರಿಯುವ ಕಾವೇರಿ ನದಿಯ ಜಲಮೂಲಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ನದಿ ಕಲುಷಿತಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ 15 ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ನಡೆಸುತ್ತಿರುವ ಜಾಗೃತಿ ಯಾತ್ರೆ, ಮಹಾಆರತಿ ಹಾಗೂ ಸ್ವಚ್ಛತಾ ಅಭಿಯಾನ ಶ್ಲಾಘನೀಯವಾಗಿದೆ ಎಂದರು.

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕಾವೇರಿ ನದಿಯ ಮಲಿನತೆಯನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಾಗಲಿದೆ. ನದಿ ಸ್ವಚ್ಛತೆಗಾಗಿ ಸರ್ಕಾರ ರೂಪಿಸಿರುವ ಒಳಚರಂಡಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕು. ಗಂಗಾ ನದಿ ಸಂರಕ್ಷಣೆಗೆ ಜಾರಿಗೊಳಿಸಿರುವ ನಮಾಮಿ ಗಂಗೆ ಮಾದರಿಯಲ್ಲಿ ನಮಾಮಿ ಕಾವೇರಿ ಯೋಜನೆಯನ್ನೂ ರೂಪಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಕುಶಾಲನಗರದ ಚಂದ್ರಮೋಹನ್ ಮಾತನಾಡಿ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಮೂಲಕ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನದಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ, ಕಾವೇರಿ ನದಿ ಹರಿಯುವ ಗ್ರಾಮ ಮತ್ತು ಪಟ್ಟಣಗಳ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಕುಸಿಯುತ್ತಿದೆ. ನದಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದರ ಜತೆಗೆ, ನದಿ ತಟದ ತ್ಯಾಜ್ಯ ನಿರ್ವಹಣೆಗೆ ಜಿಲ್ಲಾಡಳಿತ ತಕ್ಷಣ ಮುಂದಾಗಬೇಕು ಎಂದು ಮನವಿ ಮಾಡಿದರು.

ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, 2006ರಿಂದ ಸಮಿತಿಯು ಕಾವೇರಿ ನದಿ ತಟ, ದೇವಾಲಯಗಳ ಆವರಣ ಹಾಗೂ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ಪ್ರತಿ ತಿಂಗಳ ಹುಣ್ಣಿಮೆಯಂದು ಮಹಾಆರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ನಮಾಮಿ ಕಾವೇರಿ ಅಧ್ಯಕ್ಷೆ ವನಿತಾ ಕುಮಾರಸ್ವಾಮಿ, ಸಮಿತಿ ಉಪಾಧ್ಯಕ್ಷ ಆರ್.ಕೆ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ, ಸದಸ್ಯೆ ಭಾಗ್ಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು. ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸಯ್ಯ ಪೂಜಾ ಕೈಂಕರ್ಯ ನೆರವೇರಿಸಿದರು.
– ಕುಮಾರಸ್ವಾಮಿ ಎಂ.ಎನ್.
