ರಾಮನಾಥಪುರ: ಇಲ್ಲಿನ ಶ್ರೀ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಆ.27ರಿಂದ 31ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ರಾಘವೇಂದ್ರಸ್ವಾಮಿ ಭಕ್ತ ಬಳಗದ ಸದಸ್ಯರು ತಿಳಿಸಿದ್ದಾರೆ.
ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರ ನೇತೃತ್ವದಲ್ಲಿ ನಡೆಯಲಿರುವ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿದ ಭಕ್ತ ಬಳಗದ ಸದಸ್ಯರಾದ ಮೋಕ್ಷ, ಧರ್ಮ, ಪ್ರಕಾಶ್, ಸಿದ್ದಯ್ಯ, ಶಿವರಾಜ್, ಮಣಿ ಮತ್ತಿತರರು, ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ಮನವಿ ಮಾಡಿದರು.
ಆ.27ರಂದು ಗುರುವಾರ ಸಂಜೆ 7 ಗಂಟೆಗೆ ನಾದಸ್ವರ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಪೇಟೆ ಬೀದಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಇರಲಿದೆ.
ಆ.28ರಂದು ಶುಕ್ರವಾರ ಸಂಜೆ 6.30ಕ್ಕೆ ರಾಮನಾಥಪುರ ವಿದ್ಯಾನಿಕೇತನ ಹಾಗೂ ಇತರರಿಂದ ಭರತನಾಟ್ಯ, ಸಂಜೆ 7.15ಕ್ಕೆ ಧಾನ್ಯಪೂಜೆ ಹಾಗೂ ಧ್ವಜಾರೋಹಣ ನಡೆಯಲಿದೆ.
ಆ.29ರಂದು ಶನಿವಾರ ಪೂರ್ವಾರಾಧನೆ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 7ಕ್ಕೆ ಅಷ್ಟೋತ್ತರ ಪಾರಾಯಣ, 8ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7ಕ್ಕೆ ಅರಕಲಗೂಡು ಹಾಗೂ ಸುತ್ತಮುತ್ತಲಿನ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಆ.30ರಂದು ಭಾನುವಾರ ಮಧ್ಯಾರಾಧನೆ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 7ಕ್ಕೆ ಅಷ್ಟೋತ್ತರ ಪಾರಾಯಣ, 8ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7ಕ್ಕೆ ಬೆಂಗಳೂರಿನ ಕು. ಅಹಿಕ ನಾಗದೀಪ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.31ರಂದು ಸೋಮವಾರ ಉತ್ತರಾರಾಧನೆ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 7ಕ್ಕೆ ಅಷ್ಟೋತ್ತರ ಪಾರಾಯಣ, 8ಕ್ಕೆ ಪಂಚಾಮೃತ ಅಭಿಷೇಕ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಹಾಗೂ ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7ಕ್ಕೆ ಕೊಡಗು ಪೊನ್ನಂಪೇಟೆಯ ನಾಟ್ಯಸಂಕಲ್ಪ ನೃತ್ಯ ಕಲಾಶಾಲೆಯ ಶ್ರೀಮತಿ ಪ್ರೇಕ್ಷಾ ಭಟ್ ಹಾಗೂ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮಹಾಮಂಗಳಾರತಿ ನಡೆಯಲಿದ್ದು, ಶ್ರೀ ರಾಘವೇಂದ್ರಸ್ವಾಮಿ ಮಠ ಹಾಗೂ ಭಕ್ತ ಬಳಗದ ವತಿಯಿಂದ ಮೂರು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಭಕ್ತ ಬಳಗದ ಸದಸ್ಯರು ತಿಳಿಸಿದ್ದಾರೆ.
ಮಹೋತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಾಯ-ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.
