ಟಿ.ನರಸೀಪುರ : ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಒಳಭಾಗದಲ್ಲಿ ಸಿಮೆಂಟ್ ಮೂಟೆಗಳನ್ನು ಇಟ್ಟು ಹೊರಭಾಗದಲ್ಲಿ ಜಲ್ಲಿ,ಮರಳನ್ನು ಇಡುವ ಮೂಲಕ ನಾವು ಆರಾಧಿಸುವ ಮಹಾನ್ ಮಾನವತಾವಾದಿಯನ್ನು ಅವಮಾನಿಸಿ ಸಾರ್ವಜನಿಕ ಭಂಗ ತರಲು ಯತ್ನಿಸುತ್ತಿರುವವರ ವಿರುದ್ಧ ಕಠಣ ಕ್ರಮ ಕೈಗೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಮಧು ಕೆ.ಟಿ.ಆಗ್ರಹಿಸಿದ್ದಾರೆ.
ತಾಲ್ಲೂಕಿನ ಕೈಯಂಬಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಪುತ್ಥಳಿಗೆ ಅಗೌರವ ತರುವ ನಿಟ್ಟಿನಲ್ಲಿ ಕೊಳಕು ಮನಸ್ಥಿತಿಯ ವ್ಯಕ್ತಿಗಳು ನಡೆದುಕೊಳ್ಳುತ್ತಿದ್ದಾರೆ.ಪುತ್ಥಳಿಯ ಹಿಂಭಾಗ ಸಿ.ಸಿ.ರಸ್ತೆ ಕಾಮಗಾರಿ ನಡೆಯುತ್ತಿದ್ದು ಪುತ್ಥಳಿ ಇರುವ ಸ್ಥಳದಲ್ಲಿ ಸಿಮೆಂಟ್ ಚೀಲಗಳನ್ನು ಪುತ್ಥಳಿಗೆ ಅಂಟಿಕೊಂಡಂತೆ ಪುತ್ಥಳಿ ಕಾಣದ ರೀತಿ ಜೋಡಿಸಿ ಅದರ ಮೇಲೆ ಕೊಳಕಾಗಿರುವ ಟಾರ್ಪಲ್ ಮುಚ್ಚಿದ್ದಾರೆ.

ಇದರಿಂದ ಗ್ರಾಮದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವವರ ವಿರುದ್ಧ ಕಠಣ ಕ್ರಮ ಗೊಳ್ಳುವಂತೆ ಟಿ.ನರಸೀಪುರ ತಹಶಿಲ್ದಾರ್, ಇಒ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರನ್ನು ಸಲ್ಲಿಸಿದ್ದು ಅವರು ನಾನು ತೋರಿಸಿದ ಪೋಟೋ ಹಾಗೂ ವೀಡಿಯೋ ದೃಶ್ಯಗಳನ್ನು ನೋಡಿ ಮೌಖಿಕವಾಗಿ ಸಂಬಂಧಿಸಿದವರಿಗೆ ಪೋನ್ ಮಾಡಿ ತಕ್ಷಣ ಆಸ್ಥಳ ಹಾಗೂ ಸುತ್ತಮುತ್ತಲಿನ ಜಾಗವನ್ನು ಶುಚಿ ಮಾಡಬೇಕೆಂದು ಆದೇಶಿಸಿದ್ದರೂ ಯಾರ ಮಾತಿಗೂ ಬೆಲೆ ನೀಡದೇ ಕಾಮಗಾರಿ ನಡೆಸುತ್ತಿರುವವರು ಅಗೌರವ ಸೂಚಿಸಿದ್ದಾರೆಂದು ಆರೋಪಿಸಿದ್ದಾರೆ.
– ಎಂ. ನಾಗೇಂದ್ರ ಕುಮಾರ್
