ಟಿ.ನರಸೀಪುರ: ವಿಶ್ವದಾದ್ಯಂತ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ತಮಗಿಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಮಣಿದು ದುಡಿದು ಹಣ ಸಂಪಾದಿಸಲು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ.ಇದನ್ನು ಪೋಷಕರು ಅರಿತು ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶರಾದ ಎಚ್.ಆರ್.ಸಚಿನ್ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಮೀಪದ ವಿದ್ಯಾರ್ಥಿನಿಯರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಜಾಥಾ ಕಾರ್ಯಕ್ರಮವನ್ನು ಹಸಿರು ನಿಸಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ ಐಎಲ್ಒನ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ಲಕ್ಷಾಂತರ ಹುಡುಗಿಯರು ಮತ್ತು ಹುಡುಗರಿಗೆ ತಮ್ಮ ಶಿಕ್ಷ ಣದ ಹಕ್ಕು, ಆರೋಗ್ಯ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಕಾರಣ ಏನೇ ಇರಬಹುದು ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದೆಂದು ಕಿವಿಮಾತು ಹೇಳಿದರು.
ಬಾಲಕಾರ್ಮಿಕತೆಯು ಒಂದು ಅನಿಷ್ಟ ಪದ್ಧತಿಯಾಗಿದೆ ನಿರ್ಮೂಲನೆಗೆ ಅಧಿಕಾರಿಗಳು ಜಾಗೃತಿ ಮೂಲಕ ಶ್ರಮಿಸಬೇಕು. ಕಾಫಿತೋಟ, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳಲ್ಲಿ 18ಕ್ಕಿಂತ ಕಡಿಮೆ ವಯೋಮಾನದವರು ದುಡಿಮೆಯಲ್ಲಿ ತೊಡಗಿದ್ದಲ್ಲಿ ರಕ್ಷಣೆ ಮಾಡಬೇಕು.ಬಾಲಕರನ್ನು ಶಿಕ್ಷಣದಿಂದ ವಂಚಿತ ಮಾಡಿ ದುಡಿಮೆಗೆ ಹಾಕುವುದು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ತಾಲೂಕು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ ಬಾಲಕಾರ್ಮಿಕ ಪದ್ಧತಿ ಒಂದು ಅನಿಷ್ಠ ಪಿಡುಗು.ಇದನ್ನು ನಿರ್ಮೂಲನೆ ಮಾಡುವತ್ತ ನಾವೆಲ್ಲ ಶ್ರಮಿಸೋಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ಬಾಲಕಾರ್ಮಿಕರ ರಕ್ಷಣೆಗಾಗಿ ಜಗತ್ತಿನ ಗಮನ ಸೆಳೆಯಲು ವಿಶ್ವ ಕಾರ್ಮಿಕ ಸಂಘಟನೆಯು 2002ರಲ್ಲಿ ಜೂನ್ 12 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಎಂದು ಘೋಷಿಸಿತು. ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ ದೇಶದ ಉತ್ತಮ ನಾಗರಿಕರಾರಬೇಕು ಎಂಬುದು ಈ ದಿನದ ಉದ್ದೇಶವಾಗಿದೆ.
ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ.ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಬಾಲ ಕಾರ್ಮಿಕರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅಪಾಯಕಾರಿ ಪರಿಸರದಲ್ಲಿ ಕೆಲಸ, ಗುಲಾಮಗಿರಿ ಅಥವಾ ಬಲವಂತದ ದುಡಿತಕ್ಕೆ ಒಳಗಾಗುವುದು, ಮಾದಕವಸ್ತು ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಮತ್ತು ಸಶಸ್ತ್ರ ಸಂಘರ್ಷಕ್ಕೆ ಬಲಿಯಾಗುತ್ತಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಗೋವಿಂದರಾಜು ಮಾತನಾಡಿ ಬಾಲ್ಯದಲ್ಲಿ ಆಟವಾಡುತ್ತ, ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಒಂದು ಸಾಮಾಜಿಕ ಪಿಡುಗು. ಕಟ್ಟಡಗಳ ಕೆಲಸಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಗಾರ್ಮೆಂಟ್ಸ್ಗಳಲ್ಲಿ, ಬೇಕರಿ, ಗ್ಯಾರೇಜ್, ಹೊಟೇಲ್, ಕಾರ್ಖಾನೆಗಳಲ್ಲಿ, ದೊಡ್ಡ ಮನೆಗಳಲ್ಲಿ ಕೆಲಸದಾಳುಗಳಾಗಿ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವಂಥ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಪೌಷ್ಟಿಕ ಆಹಾರ ಕೊರತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಕೆಲವೊಮ್ಮ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಬಾಲ ಕಾರ್ಮಿಕ ಪದ್ಧತಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 12 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಬಾಲಕಾರ್ಮಿಕ ವಿರೋಧಿ ಜಾಗೃತಿ ಮೂಡಿಸುವಂತಹ ನಾಮಫಲಕಗಳಗಳನ್ನು ಮೆರವಣಿಗೆ ಮೂಲಕ ಪ್ರದರ್ಶನ ಮಾಡುತ್ತಾ ಸಾರ್ವಜನಿಕರ ಗಮನ ಸೆಳೆದರು.
- ಎಂ.ನಾಗೇಂದ್ರ ಕುಮಾರ್
