ನೈಜೀರಿಯಾ : ಬೆನ್ಯೂ ರಾಜ್ಯದಲ್ಲಿ ರಕ್ತಪಾತವನ್ನು ಕೊನೆಗೊಳಿಸಬೇಕೆಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ನೈಜೀರಿಯಾ ಸರ್ಕಾರಕ್ಕೆ ಕರೆ ನೀಡುತ್ತಿದ್ದಂತೆ, ಉತ್ತರ – ಮಧ್ಯ ನೈಜೀರಿಯಾದ ಪಟ್ಟಣದಲ್ಲಿ ರಾತ್ರೋರಾತ್ರಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 100 ಜನ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ನೈಜೀರಿಯಾ, ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ದಾಳಿ ನಡೆಸಲಾಗಿದ್ದು, ಅನೇಕ ಜನ ಕಾಣೆಯಾಗಿದ್ದಾರೆ. ಇನ್ನ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಅಲ್ಲದೇ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಸಿಕ್ಕದೆ ಪರದಾಡುತ್ತಿದ್ದಾರೆ ಎಂದು ಹೇಳಿದೆ. ವರದಿಯ ಪ್ರಕಾರ, ಈ ದಾಳಿಯಲ್ಲಿ ಹೆಚ್ಚಾಗಿ ರೈತರೇ ಸಾವನ್ನಪ್ಪಿದ್ದು, ಅನೇಕ ಕುಟುಂಬವನ್ನು ಮನೆಯ ಒಳಗೆ ಕೂಡಿ ಹಾಕಿ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಬೆನ್ಯೂವಿನಲ್ಲಿ ಅನೇಕ ದಿನಗಳಿಂದ ರಕ್ತಪಾತ ನಡೆಯುತ್ತಿತ್ತು, ಇದೀಗ ಅದನ್ನು ತಡೆಯುವಂತೆ ಅಮ್ನೆಸ್ಟಿ ಕರೆ ನೀಡುತ್ತಿದ್ದಂತೆ ಈ ದಾಳಿ ನಡೆದಿದ್ದು, ಈ ದಾಳಿಯಲ್ಲಿ ರೈತರೇ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಆಹಾರದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
