ತುಮಕೂರು:ವಕೀಲರು ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಜಂಜಾಟಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಇದರಿಂದ ಹೃದಯ ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ,ಆದ್ದರಿಂದ ಎಲ್ಲ ವಕೀಲರು ತಮ್ಮ ಬಿಡುವಿನ ಸಮಯದಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು ಎಂದು ಉಚ್ಛ ನ್ಯಾಯಾಲಯದ ವಕೀಲರು ಮತ್ತು ರಾಜ್ಯ ವಕೀಲರ ಪರಿಷತ್ನ ಸದಸ್ಯರಾದ ಜಿ.ನಾರಾಯಣಸ್ವಾಮಿರವರು ತಿಳಿಸಿದರು.
ಅವರು ಇಂದು ಎಸ್.ಎಸ್.ಐ.ಟಿ ಕಾಲೇಜಿನ ಮೈದಾನದಲ್ಲಿ ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಹಮ್ಮದ್ ಅಶ್ರಫ್ ಆರಿಸ್ ರವರು ವಕೀಲರು ಸದಾ ಒತ್ತಡದಲ್ಲಿರುತ್ತಾರೆ,ಒತ್ತಡದ ನಡುವೆ ಅವರು ಕ್ರೀಡೆಯಾಗಲಿ ಅಥವಾ ಆರೋಗ್ಯದ ಕಡೆ ಗಮನ ಹರಿಸುವುದು ಕಷ್ಟಕರ,ಬೆಳಿಗ್ಗೆ ವಾಕ್ ಮಾಡುವುದು,ಅಗತ್ಯಕ್ಕೆ ತಕ್ಕಂತೆ ವಿಶ್ರಾಂತಿ ಪಡೆಯುವುದು,ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಎಲ್ಲ ವಕೀಲರು ಉತ್ತಮ ಆರೋಗ್ಯ ಹೊಂದುವುದು ಅವಶ್ಯಕ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ರವರು ವಕೀಲರು ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ನಾವು ವರ್ಷಕ್ಕೊಮ್ಮೆ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳನ್ನು ಆಡಿಸುತ್ತಿದ್ದೇವೆ,ಜೊತೆಗೆ ಜಿಲ್ಲಾವಾರು ಸ್ಪರ್ಧೆಗಳಿಗೆ ವಕೀಲರನ್ನು ಕಳಿಸುತ್ತಿದ್ದೇವೆ ಇದರಿಂದ ಅವರ ನೈತಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಸ್ಪರ್ಧಾ ಮನೋಭಾವ ಬೆಳೆಯುತ್ತದೆ ನಮ್ಮ ಜಿಲ್ಲಾ ವಕೀಲರ ಸಂಘದ ಸದಸ್ಯರಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ,ಕ್ರಿಕೆಟ್,ವಾಲಿಬಾಲ್,ಕಬ್ಬಡ್ಡಿ ಹೀಗೆ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ ಆದ್ದರಿಂದ ಇಂದು 2ನೇ ವರ್ಷದ ಕ್ರಿಕೆಟ್ ಆಡುತ್ತಿದ್ದಾರೆ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿ ವೈಯಕ್ತಿಕವಾಗಿ 10ಸಾವಿರ ನಗದನ್ನು ಕ್ರೀಡಾಕೂಟಕ್ಕೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಎಲ್ಲ ವಕೀಲರು ಕ್ರೀಡಾ ಮನೋಭಾವನೆಯನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಇದು ತಮ್ಮ ಆರೋಗ್ಯಕ್ಕೂ ಅನ್ವಯ ಜೀವನಕ್ಕೂ ಅನ್ವಯ,ಇಂದು ಹಣಕ್ಕಿಂತ ಉತ್ತಮ ಆರೋಗ್ಯ ಹೊಂದುವುದೇ ಜೀವನದ ಸೌಭಾಗ್ಯ,ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ,ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಒಂದೇ ಕಡೆ ಕೇಂದ್ರೀಕರಣವಾಗುತ್ತದೆ,ಇದರಿAದ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸುಗಳಿಸಬಹುದು,ಕ್ರೀಡೆಯಿಂದ ಶಿಸ್ತು,ಸಮಯಪ್ರಜ್ಞೆ,ನೈತಿಕ ಅರಿವು,ಮನಸ್ಸು ಸಹ ಯಾವುದೇ ರೀತಿಯಲ್ಲೂ ವಿಚಲಿತರಾಗದೆ ಧೈರ್ಯವಾಗಿ ಇರಬಹುದು ಎಂದು ತಿಳಿಸುತ್ತಾ ವೈಯಕ್ತಿಕವಾಗಿ ಹತ್ತು ಸಾವಿರ ರೂಗಳನ್ನು ಕ್ರೀಡಾಕೂಟಕ್ಕೆ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಖಜಾಂಚಿ ಶ್ರೀಮತಿ ಸಿಂಧೂಮಲ್ಲಿಕಾರ್ಜುನ್,ಜಗದೀಶ್,ಗೋವಿಂದರಾಜು ಇತರರು ಉಪಸ್ಥಿತರಿದ್ದರು.
ವೇದಿಕೆಯ ಪರವಾಗಿ ಹಿರಿಯ ಶಿರಸ್ತೇದಾರ್ ಎಂ.ಕೆ.ಜಗದೀಶ್, ವಕೀಲರಾದ ಮಂಜುಯಾದವ್, ಆರ್.ಟಿ.ತಿಪ್ಪೇಸ್ವಾಮಿರವರನ್ನು ಸನ್ಮಾನಿಸಿ ಗೌರವಿಸಲಾಯಿತು.
– ಚಂದ್ರಚೂಡ ಕೆ.ಬಿ.
