ಟಿ.ನರಸೀಪುರ : ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಂಬಳದ ಹಣವನ್ನು ಸರ್ಕಾರ ಬಿಡುಗಡೆ ಮಾಡದಿದ್ದರೆ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಲಾಗುವುದೆಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಸಿದರು.
ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಬೋಧಕರಿಗೆ ಕಳೆದ ಹತ್ತು ತಿಂಗಳಿನಿಂದ ಕಾಲೇಜಿನ ಪ್ರಾಂಶುಪಾಲರು ಸಂಬಳ ನೀಡದೆ ಇರುವುದರಿಂದ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
2024-25 ನೇ ಸಾಲಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಬೋಧಕರಿಗೆ ಸಿಡಿಸಿ ಕಮಿಟಿ,ಸರ್ಕಾರ ಹಣ ಬಿಡುಗಡೆ ಮಾಡದೆ ಇರುವುದು ಇವರ ಬೇಜವಾಬ್ದಾರಿ ನಡೆಯನ್ನು ತೋರಿಸಿದೆ ಜೀತದಾಳುಗಳ ಮಾದರಿಯಲ್ಲಿ ಕೇವಲ ಹನ್ನೆರೆಡು ಸಾವಿರಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದು ಇದನ್ನೂ ಸಹ ನೀಡಲಾಗದೆ ಇರುವುದು ವಿಪರ್ಯಾಸವೇ ಸರಿ ಎಂದು ಆಡಳಿತದ ವಿರುದ್ಧ ಹರಿಹಾಯ್ದರು.ಈಗಾಗಲೇ ಇದರಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ,ಪ್ರವಚನ ನಡೆಯದೇ ಮಧ್ಯಾಹ್ನದ ವೇಳೆಗೆ ಮನೆಗೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರೂ ಆಗಿರುವ ಡಾ.ಹೆಚ್.ಸಿ.ಮಹದೇವಪ್ಪರವರು ಇವರಿಗೆ ಸಂಬಳ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ವಿದ್ಯಾರ್ಥಿಗಳೊಡಗೂಡಿ ದಲಿತ ಸಂಘರ್ಷ ಸಮಿತಿ ಹಾಗೂ ಉಪನ್ಯಾಸಕರು ಕಾಲೇಜಿನ ಮುಂಭಾಗ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕರಾದ ರಾಜಮ್ಮ ಮಾತನಾಡಿ ಜೀವನಕ್ಕಾಗಿ ಕಡಿಮೆ ಸಂಬಳ ಇದ್ದರೂ ಈ ಕೆಲಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ.ನಮಗೆ ನಮ್ಮ ದೈನಂದಿನ ಖರ್ಚು ವೆಚ್ಚಗಳಿಗೂ ಹಣವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನನಗೆ ಆರೋಗ್ಯವೂ ಸರಿ ಇಲ್ಲ ಔಷಧಿ ತೆಗೆದುಕೊಳ್ಳಲೂ ಸಹ ಹಣವಿಲ್ಲದೇ ಏನು ಮಾಡಬೇಕೆಂದು ತಿಳಿಯುತ್ತಿಲ್ಲ.ಅಲ್ಪ ಸಂಬಳದ ಗೌರವ ಧನವೂ ಇಲ್ಲದೇ ಜೀವನ ನಡೆಸಲು ಕಷ್ಟವಾಗುತ್ತಿದೆ.ಪ್ರಾಂಶುಪಾಲರ ಬಳಿ ನಮ್ಮ ನೋವನ್ನು ತೋಡಿಕೊಂಡಾಗ ಸಂಬಳದ ವಿಷಯವಾಗಿ ನನ್ನ ಬಳಿ ಬರಬೇಡಿ ಎಂದು ಹೇಳಿದ್ದಾರೆ.ಆಗಾದರೆ ನಾವು ಯಾರ ಬಳಿ ಹೋಗಬೇಕೆಂದು ತಿಳಿಯುತ್ತಿಲ್ಲವೆಂದು ದುಃಖಿತರಾದರು.

ಮತ್ತೋರ್ವ ಅತಿಥಿ ಉಪನ್ಯಾಸಕರಾದ ಅಂಜನ್ ಕುಮಾರ್ ಮಾತನಾಡಿ ಕಳೆದ ಐದು ವರ್ಷಗಳಿಂದ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಕಳೆದ ಹತ್ತು ತಿಂಗಳಿನಿಂದ ನಮಗೆ ಗೌರವ ಧನ ನೀಡದೇ ಇರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ.ವಾರಕ್ಕೆ 20 ಗಂಟೆಗಳು ಪಾಠ,ಪ್ರವಚನ ಮಾಡಿ,ಉತ್ತಮ ಫಲಿತಾಂಶ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದರೂ ನಮ್ಮ ಶ್ರಮಕ್ಕೆ ಬೆಲೆ ಇಲ್ಲದಂತ್ತಾಗಿದೆ.ನಮ್ಮ ಜೀವನೋಪಾಯಕ್ಕಾಗಿ ಹಣವು ಮುಖ್ಯವಾಗಿರುವುದರಿಂದ ನಮ್ಮ ಸಂಬಳವನ್ನು ಕೊಡಬೇಕೆಂದು ಮನವಿ ಮಾಡುತ್ತೇವೆ.
ಈಗಾಗಲೇ ನಮ್ಮ ಕಾಲೇಜಿನ ಅಧ್ಯಕ್ಷರು ಆಗಿರುವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಹೆಚ್.ಸಿ.ಮಹದೇವಪ್ಪರವರಿಗೆ ವಮ್ಮ ಮನವಿ ಸಲ್ಲಿಸಿದ್ದೇವೆ.ಆದರೂ ಇಲ್ಲಿಯವರೆವಿಗೂ ಪರಿಹಾರ ಮಾತ್ರ ದೊರೆತ್ತಿಲ್ಲ.ಕಳೆದ ವರ್ಷದ ಸಂಬಳ ಕಳೆದುಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕೆಲಸವನ್ನು ಕಳೆದುಕೊಂಡು ನಮಗೆ ದಿಕ್ಕೇ ತೋಚದಂತ್ತಾಗಿದೆ.ಒಂದುಕಡೆ ಕೆಲಸದ ಅಭದ್ರತೆ ಮತ್ತೊಂದುಕಡೆ ಹಣಕಾಸಿನ ಸಮಸ್ಯೆ ಒಟ್ಟಾಗಿ ಭಾದಿಸುತ್ತಿದ್ದು ನಮ್ಮ ಕಷ್ಟ ಕರ ದಿನಗಳಲ್ಲಿ ಸರ್ಕಾರ ಸ್ಪಂಧಿಸಿ ಕೂಡಲೇ ನಮ್ಮ ಗೌರವ ಧನ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರುಗಳಾದ ರಾಜಮ್ಮ,ಕವಿತಾ,ಅಂಜನ್ ಕುಮಾರ್ ಇದ್ದರು.
– ಎಂ.ನಾಗೇಂದ್ರ ಕುಮಾರ
