ಹಾಸನ- ತಾಲೂಕಿನಲ್ಲಿ ಒಟ್ಟು 1925 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಬಿಳಿಸುಳಿ ರೋಗಕ್ಕೆ ಬಲಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಇಂದು ಅಧಿಕಾರಿಗಳೊಂದಿಗೆ ಸಾಲಗಾಮೆ ಹೋಬಳಿ ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಹಾನಿಯಾಗಿರುವ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಒಟ್ಟು 12,200 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಇದರಲ್ಲಿ ಸಾಲಗಾಮೆ-425 ಹಾಗೂ ಕಸಬಾದಲ್ಲಿ-1500 ಹೆಕ್ಟೇರ್ ಪ್ರದೇಶದ ಬೆಳೆ ರೋಗದಿಂದ ನಾಶವಾಗಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಬೆಳೆ ಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದರು. ಇದೇ ವೇಳೆ ಸುತ್ತಮುತ್ತಲ ಗ್ರಾಮಗಳ ರೈತರು ಜೋಳ ನಾಶವಾಗಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡರು.
ತಾಳ್ಮೆಯಿಂದ ಅರ್ಜಿ ನೀಡಿ ಖಾತೆ ಮಾಡಿಸಿಕೊಳ್ಳಿ: ಇದಕ್ಕೂ ಮುನ್ನ ಸಾಲಗಾಮೆ ಗ್ರಾಪಂ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಲಗಾಮೆ ಹೋಬಳಿ ಪೌತಿ ಖಾತಾ ಅಂದೋಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಅಧಿಕಾರಿಗಳೇ ತಮ್ಮ ಬಳಿ ಬಂದು ಖಾತೆ ಮಾಡಿ ಕೊಡುವುದು ಪೌತಿಖಾತಾ ಆಂದೋಲನದ ಉದ್ದೇಶವಾಗಿದ್ದು, ಅಧಿಕಾರಿಗಳಿಗೆ ಒತ್ತಡ ನೀಡದೆ ತಾಳ್ಮೆಯಿಂದ ಅರ್ಜಿಗಳನ್ನು ನೀಡಿ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಚಿವರಾದ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ಮಾಡಿದ್ದಾರೆ. ಪೌತಿ ಖಾತೆ ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ತಮ್ಮಲ್ಲಿ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ವೇಗವಾಗಿ ಕೆಲಸಗಳು ಆಗುತ್ತವೆ, ಇಲ್ಲವೇ ಜಿಲ್ಲಾಧಿಕಾರಿಗಳ ಬಳಿ ಹೋಗಿ ತನಿಖೆಯಾದ ನಂತರ ತಮ್ಮ ಹೆಸರಿಗೆ ಖಾತೆಗಳು ಆಗುತ್ತವೆ ಎಂದು ಹೇಳಿದರು.
ತಹಶೀಲ್ದಾರ್ ಅವರು ಕ್ರಿಯಾಶೀಲರಾಗಿ ಪಂಚಾಯಿತಿ, ಹೋಬಳಿ ಮಟ್ಟಕ್ಕೆ ಬಂದು ಕೆಲಸ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಒತ್ತಡ ನೀಡದೇ ಖಾತೆ ಮಾಡಿಸಿಕೊಳ್ಳಿ ಎಂದರಲ್ಲದೇ ಮೆಕ್ಕೆಜೋಳಕ್ಕೆ ಇತ್ತೀಚೆಗೆ ರೋಗ ಬರುತ್ತಿದೆ ಅದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ನೀಡುವಂತಹ ಸಲಹೆ ಸೂಚನೆಗಳನ್ನು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಇದೇ ವೇಳೆ ಶಾಸಕರು ತಿಳಿಸಿದರು.
ತಹಶೀಲ್ದಾರ್ ಗೀತಾ ಮಾತನಾಡಿ, ಸರ್ಕಾರದಿಂದ ಬಂದ ಅಧಿಸೂಚನೆಯಂತೆ ನಾವು ನಮ್ಮ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿಯೂ ಪೌತಿ ಖಾತೆ ವಿತರಣೆ ಮಾಡುತ್ತಿದ್ದೇವೆ.
ಇದು 4ನೇ ಹೋಬಳಿಯಾಗಿದೆ. ಈಗಾಗಲೇ 3500 ಕಡತಗಳ ಖಾತೆ ಮಾಡಿದ್ದೇವೆ. ಇನ್ನು 50,000 ಪೌತಿ ಖಾತೆ ಬಾಕಿ ಇವೆ. ರೈತರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಇದೊಂದು ಸುಲಭದ ರೀತಿಯಾಗಿದೆ. ಇಂದು ಕೂಡಾ ಪೌತಿ ಖಾತೆಗೆ ಅರ್ಜಿ ಸಲ್ಲಿಸಬಹುದು. ಸದುಪಯೋಗ ಪಡೆದುಕೊಳ್ಳಬಹುದು ಎಂದು ಪೌತಿ ಖಾತೆ ಮಹತ್ವ ಹಾಗೂ ಅದನ್ನು ಮಾಡಿಸಿಕೊಳ್ಳುವ ವಿಧಾನದ ಕುರಿತು ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ರೈತರು ಮನವಿ ಪತ್ರಗಳನ್ನು ನೀಡಿದರು. ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಮುಖಂಡರು, ಗ್ರಾಮ ಲೆಕ್ಕಾಧಿಕಾರಿಗಳು, ರೈತರು, ಸಾರ್ವಜನಿಕರು ಇದ್ದರು.
ಹಾಸನ ತಾಲ್ಲೂಕಿನಲ್ಲಿ ಅಧಿಕಾರಿಗಳು ನಿಮ್ಮ ಅರ್ಜಿ ತೆಗೆದುಕೊಂಡು ಶೀಘ್ರ ತಮ್ಮ ಹೆಸರಿಗೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ರೈತರು ದುರಸ್ತಿ ಬಗ್ಗೆ ಕೇಳುತ್ತಿದ್ದರು. ಈಗಾಗಲೇ ತಹಸೀಲ್ದಾರ್ ಕಚೇರಿಯಿಂದ 6500 ಅರ್ಜಿ ಎಡಿಎಲ್ಆರ್ ಕಚೇರಿಗೆ ತಲುಪಿವೆ. 2500 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನುಳಿದ 4000 ಅರ್ಜಿಗಳೂ ಶೀಘ್ರ ವಿಲೇವಾರಿ ಆಗಲಿವೆ ಎಂದು ಶಾಸಕರು ಹೇಳಿದರು.
