ಕೆ.ಆರ್.ಪೇಟೆ: ಪಟ್ಟಣದಲ್ಲಿರುವ ಶ್ರೀ ದುಂಡು ಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಪ್ರಸೂತಿ ತಜ್ಞೆ ಹಾಗೂ ಸ್ತ್ರೀರೋಗ ತಜ್ಞೆಯಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದ ಡಾ. ಪ್ರಿಯಾಂಕ ಗೊಟಿಯಳ್ ಅವರಿಗೆ ವರ್ಗಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಸ್ಪತ್ರೆಯ ಸಭಾಂಗಣದಲ್ಲಿ ವರ್ಗಾವಣೆಗೊಂಡ ಡಾ:ಪ್ರಿಯಾಂಕ ಗೊಟಿಯಳ್ ಅವರನ್ನು ಶಾಲು, ಹಾರ,ಹಾಕಿ ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿ ಗೌರವಿಸಿದರು.
ಅಭಿನಂದಿಸಿ ಮಾತನಾಡಿ ಗ್ರಾ. ಪಂ ಮಾಜಿ ಅಧ್ಯಕ್ಷೆ ಮೂಡನಹಳ್ಳಿ ಮಧು ಡಾ.ಪ್ರಿಯಾಂಕ ಗೊಟಿಯಳ್ ಅವರು ತಾಲ್ಲೂಕಿನ ಸಾವಿರಾರು ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ತಾಯಿಯ ಮಮತೆಯಿಂದ ಚಿಕಿತ್ಸೆ ನೀಡಿದ್ದಾರೆ. ಹಗಲು-ರಾತ್ರಿ ಎನ್ನದೆ ತುರ್ತು ಹೆರಿಗೆ ಪ್ರಕರಣಗಳನ್ನು ನಿಭಾಯಿಸಿ ಅನೇಕ ತಾಯಿ-ಮಕ್ಕಳ ಜೀವ ಉಳಿಸಿದ್ದಾರೆ.ಅವರ ಸೇವೆ ತಾಲ್ಲೂಕು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಭಾವುಕರಾಗಿ ಮಾತನಾಡಿದ ಡಾ. ಪ್ರಿಯಾಂಕ ಗೊಟಿಯಳ್ 10 ವರ್ಷ ಈ ಆಸ್ಪತ್ರೆ, ಈ ಊರಿನ ಜನರೇ ನನ್ನ ಕುಟುಂಬವಾಗಿದ್ದರು. ಸಾರ್ವಜನಿಕರು ತೋರಿದ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿ. ವರ್ಗಾವಣೆ ಸರ್ಕಾರಿ ನೌಕರಿಗೆ ಸಹಜ, ಆದರೆ ಕೆ.ಆರ್.ಪೇಟೆ ಜನರೊಂದಿಗಿನ ಬಾಂಧವ್ಯ ಶಾಶ್ವತ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆಸ್ಪತ್ರೆಯ ವೈದ್ಯ ಆಡಳಿತ ಅಧಿಕಾರಿ ಡಾ: ಮಂಜುಳ,ಗ್ರಾ.ಪಂ ಮಾಜಿ ಅಧ್ಯಕ್ಷ ಮೂಡನಹಳ್ಳಿ ಮಧು, ಕೃಷಿಕ ಸಮಾಜ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್,ಬೋರೇಗೌಡ,ಡಾ.ಕೋಮಲ, ಡಾ.ಪ್ರಕಾಶ್ ನಾಯಕ,ಡಾ.ಶಿವಕುಮಾರ್,ಡಾ ಛಾಯಾ,ಡಾ.ರಾಧಾ,ಡಾ. ಪುಟ್ಟಸ್ವಾಮಿ,ಶುಶ್ರೂಷಕ ಅಧಿಕಾರಿ ಕಲ್ಪನಾ,ಸುರಕ್ಷಾ ಗ್ರೂಪ್,ಆಶಾ ಕಾರ್ಯಕರ್ತೆಯರು ಹಾಗೂ ಡಾ. ಪ್ರಿಯಾಂಕ ಅವರಿಂದ ಚಿಕಿತ್ಸೆ ಪಡೆದ ಮಹಿಳೆಯರು, ಸಾರ್ವಜನಿಕರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
