ಟಿ.ನರಸೀಪುರ : ಸರಳ ಸಜ್ಜನಿಕೆ ಸ್ವಭಾವದ ಡಾ.ಯತೀಂದ್ರ ಸಿದ್ದರಾಮಯ್ಯರವರು ವೃತ್ತಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ತಾನು ವೈದ್ಯ ಎಂದು ಅಹಂಕಾರ ತೋರಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಪ್ರತಾಪ್ ಸಿಂಹ ರವರು ಮಾಧ್ಯಮದ ಮುಂದೆ ಕೇವಲವಾಗಿ ಮಾತನಾಡಿರುವುದು ಖಂಡನೀಯವೆಂದು ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಮೇಶ್ ತಿಳಿಸಿದರು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತೀಂದ್ರರ ಹಿನ್ನೆಲೆ ಅರಿಯದೇ ತಲೆ ಬುಡವಿಲ್ಲದ ಹೇಳಿಕೆ ನೀಡಿರುವ ಮಾಜಿ ಸಂಸದರಿಗೆ ಬುದ್ದಿ ಭ್ರಮಣೆಯಾದಂತಿದ್ದು, ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವು ಅವರಿಗಿಲ್ಲ ಎಂದು ಕಿಡಿಕಾರಿದರು.ಯತೀಂದ್ರರಿಗೆ ಜಾತಿ ಗಣತಿ ಬಗ್ಗೆ ಏನು ಗೊತ್ತಿದೆ? ಅವರು ಇನ್ನೂ ಇದರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ರವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಡಾ.ಯತೀಂದ್ರರವರು 2018ರಲ್ಲಿ ಬಹುಮತದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದವರು. ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣ
ಕ್ಷೇತ್ರದಲ್ಲಿ ಸಿದ್ದರಾಮಯ್ಯರವರನ್ನು ಗೆಲ್ಲಿಸಲು ದಂಡನಾಯಕರಂತೆ ನಿಂತು ಕೆಲಸ ಮಾಡಿದ್ದಾರೆ. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವ ನೈತಿಕತೆ ನಿಮಗಿದೆಯೇ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.
ಮುಂದುವರಿದ ವರ್ಗ ಹಾಗೂ ಹಿಂದುಳಿದ ವರ್ಗಗಳೆರಡರಲ್ಲೂ ಬಡವರಿದ್ದಾರೆ. ಹೀಗಾಗಿ ಸಾಮಾಜಿಕ, ಶೈಕ್ಷಣಿಕ ಸರ್ವೆಯನ್ನು ಸರ್ಕಾರ ಮಾಡುತ್ತಿದೆ. ಅಂದೇ ನಮ್ಮ ವರದಿ ಒಪ್ಪಿದ್ದರೆ, ಎಲ್ಲರಿಗೂ ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ ಅಷ್ಟೇ. ಇದು ನಿಮಗೆ ಅರ್ಥವಾಗಿಲ್ಲವೇ ಎಂದು ಪ್ರಶ್ನಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷವೇ ನಿಮಗೆ ಟಿಕೆಟ್ ಕೊಡದೇ ಮೂಲೆ ಗುಂಪು ಮಾಡಿತು. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಅಭಿವೃದ್ಧಿ ಕೆಲಸವನ್ನು ನಾನೇ ಮಾಡಿದ್ದು ಎಂದು ಬಿಂಬಿಸಲು ಹೊರಟಿದ್ದ ನಿಮಗೆ ಪಕ್ಷ ಸರಿಯಾದ ಪಾಠ ಕಲಿಸಿದೆ. ಮುಂದೆಯೂ ನಿಮಗೆ ನಿಮ್ಮ ಪಕ್ಷದಲ್ಲಿ ಏನೂ ಸಿಗುವುದಿಲ್ಲ.ಸುಖಾ ಸುಮ್ಮನೆ ಸಿಎಂ ಸಿದ್ದರಾಮಯ್ಯ ಹಾಗೂ ಯತೀಂದ್ರರನ್ನು ತೇಜೋವಧೆ ಮಾಡುವ ಕೆಲಸ ಕೈ ಬಿಡಿ.ಅವರ ಹಿಂದೆ ಬಲಿಷ್ಠವಾದ ಸೈನ್ಯ ಇದೆ ಎಂಬುದನ್ನು ಮರೆಯಬೇಡಿ ಎಂದು ಕಿಡಿ ಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ಎಲ್ಐಸಿ ನಿಂಗರಾಜು, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಬಣ್ಣ ಬಸವರಾಜು, ವರುಣ ಯುವ ಘಟಕದ ಅಧ್ಯಕ್ಷ ಅಮಾಸೆಗೌಡ, ಉಪಾಧ್ಯಕ್ಷ ಪುರಿ ನಟೇಶ್, ಮುಖಂಡರಾದ ಫೈನಾನ್ಸ್ ಕಾಂತರಾಜು, ಅಶ್ವತ್ಥಾಮ, ಎಂ.ಮಿಥುನ್, ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
- ಎಂ.ನಾಗೇಂದ್ರ ಕುಮಾರ್
ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಕಾರ್ಯಕ್ರಮ- ಹಂಜಳಿಗೆ ಮಂಜುನಾಥ್ ಕಾಳಿಂಗಪ್ಪ ಮಾಹಿತಿ
