ಮೈಸೂರು : ಪುಸ್ತಕಗಳು ನಮ್ಮ ಬದುಕಿಗೆ ಆದ್ಯತೆಯಲ್ಲಾ, ಬದಲಿಗೆ ಪ್ರತಿಷ್ಟೆಯಾಗಿ ತೆಗೆದುಕೊಳ್ಳಬೇಕು. ನಿನ್ನ ಕೈಯಲ್ಲಿ ಒಂದು ಪುಸ್ತಕವಿರಲಿ.ಜ್ಞಾನದ ಪ್ರತೀಕವಾದ ಪುಸ್ತಕವಿಲ್ಲದಿದ್ದರೆ ಸಮಾಜ ನಮ್ಮನ್ನು ನೋಡುವ ದೃಷ್ಟಿ ಕೋನವೇ ಬೇರೆಯದ್ದೇ ಆಗಿರುತ್ತದೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಶಾಲಾ ಕಾಲೇಜುಗಷಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಚಿಂದಿ-ಹರಕು ಬಟ್ಟೆಯನ್ನೇ ಹಾಕಿಕೊ ಆದರೆ ನಿನ್ನ ಕೈಯಲ್ಲಿ ಒಂದು ಪುಸ್ತಕವಿರಲಿ. ಜ್ಞಾನದ ಪ್ರತೀಕವಾದ ಪುಸ್ತಕವಿಲ್ಲದಿದ್ದರೆ ಜ್ಞಾನ ಲಭಿಸುವುದಿಲ್ಲ. ತಂತ್ರಜ್ಞಾನ ಮುಂದುವರಿದಂತೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿಂದೆ ಮಹಿಳೆಯರು,ಪುರುಷರು ತಮ್ಮ ಕೆಲಸ ಮಾಡುವಾಗಲೂ ಪುಸ್ತಕ ಓದುತ್ತಿದ್ದರು. ಮಹಿಳೆಯರು ಅಡುಗೆ ಮನೆಯಲ್ವಿ ಕೆಲಸ ಮಾಡುತ್ತಿದ್ದರೂ ಪುಸ್ತಕ ಓದುತ್ತಿದ್ದರು. ಆದರೀಗ ನಮ್ಮ ಕೈಯಲ್ಲಿ ಮೊಬೈಲ್ ಪೋನ್ಗಳು ಆವರಿಸಿಕೊಂಡು ಬಿಟ್ಚಿವೆ. ಇದರಿಂದ ಕೈಯಲ್ಲಿ ಪುಸ್ತಕದ ಬದಲಿಗೆ ಪೋನ್ಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದರು.

ಅರಿಶಿನ,ಕುಂಕುಮ,ಅಗರಭತ್ತಿ ತೆಗೆದುಕೊಂಡು ಹೋಗುವ ಆಗೆ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ತೆರೆದರೆ ಹಂತ,ಹಂತವಾಗಿ ಓದುವ ಅಭ್ಯಾಸ ಬರುತ್ತದೆ.ಒಂದು ಲಕ್ಷ ಮನೆಯಲ್ಲಿ ಒಂದು ಗ್ರಂಥಾಲಯ ಮಾಡಿಸುವ ಆಲೋಚನೆ ಇದೆ. ಅದನ್ನು ಮಾಡಲೇಬೇಕೆಂದರು. ಮನೆಗೆ 5೦೦ ಪುಸ್ತಕಗಳು ಬಂದರೆ ೫ ಕೋಟಿ ಪುಸ್ತಕಗಳು ಪ್ರಿಂಟ್ ಆಗುತ್ತವೆಂದರು ಪ್ರಕಾಶಕರಿಗೆ,ಲೇಖಕರಿಗೆ,ಡಿಟಿಪಿ,ಪ್ರಿಂಟಿಗ್ ಪ್ರೆಸ್ ಇವರೆಲ್ಲರಿಗೂ ಇದರಿಂದ ಜೀವನ ನಡದೇ ನಡೆಯುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ಮನೆಯಲ್ಲಿ ಗ್ರಂಥಾಲಯ ತರೆದು ಮಾದರಿಯಾಗಿದ್ದಾರೆ. ಆಗೇ ಮುಂದಿನ ದಿನಗಳಲ್ಲಿ ನಾವೆಲ್ಲರೂ ನಮ್ಮ ಮನೆಯಲ್ಲಿ ಗ್ರಂಥಾಲಯ ಆರಂಭಿಸೋಣ ಎಂದರು.

ನಮ್ಮ ಡಾ.ರಾಜ್ ಕುಮಾರ್,ಬಿಸ್ಮಿಲ್ಲಾಖಾನ್ ರವರು ಶಾಲೆಗೆ ಹೋಗದೇ ವಿಷಯ ಪರಿಣಿತಿಯನ್ನು ತಮ್ಮ ಓದುವ ಹಸಿವಿನಿಂದ ಮಾಡಿಕೊಂಡರು. ಶಾಲೆಗೆ ಹೋಗದೆ ಮನೆಯಲ್ಲೇ ತಮ್ಮ ಬಿಡುವಿನ ವೇಳೆಯಲ್ಲಿ ಓದುವುದನ್ನು ಕಲಿತು ಹಲವಾರು ಪುಸ್ತಕಗಳನ್ನು ಓದುವ ಮೂಲಕ ಗೌರವ ಡಾಕ್ಟರೇಟ್ ಪಡೆದ ಮಹನೀಯರವರು. ಅವರು ನಮಗೆಲ್ಲಾ ಸ್ಪೂರ್ತಿದಾಯಕರಾಗಿದ್ದಾರೆಂದು ಸ್ಮರಿಸಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿ ಇಲ್ಲಿ 5೦ ಸಾವಿರ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಎಲ್ಲರಿಗೂ ಮಾದರಿ ಜಿಲ್ಲೆ ಯಾಗಲಿ ಎಂದರು.
ಹೆಸರಾಂತ ಹಿರಿಯ ಕವಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ರವರು ಮಾತನಾಡಿ, ಶಾಲಾ,ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ,ಮನೆಗೊಂದು ಗ್ರಂಥಾಲಯ ಹಾಗೂ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾದ ಕಾರ್ಯಕ್ರಮವಾಗಿದೆ.ಪುಸ್ತಕ ಸಂಸ್ಕೃತಿ ಕುಗ್ಗುತ್ತಾ ಕುಸಿಯುತ್ತಿದೆ.ಪುಸ್ತಕ ಸಂಸ್ಕೃತಿಯ ಬೆಳಕು ಮಬ್ಬಾಗುತ್ತಿದೆ. ಇದಕ್ಕೆ ಕಾರಣ ಏನೆಂದರೆ ಸಾಮಾಜಿಕ ಜಾಲತಾಣಗಳ ಹಾವಳಿ ಎಂದು ಆತಂಕ ವ್ಯಕ್ತಪಡಿಸಿದರು.

ಉಚಿತವಾಗಿ ಪುಸ್ತಕಗಳನ್ನು ನೀಡುವಾಗ ಒಳ್ಳೆಯ ಪುಸ್ತಕಗಳನ್ನೇ ನೀಡಬೇಕು.ಮನೆಗೊಂದು ಗ್ರಂಥಾಲಯ ಮಾಡಿದಾಗ ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ನೆನಸಬೇಕು ಅವರೊಬ್ಬ ಪುಸ್ತಕ ದೈತ್ಯ.ಅವರನ್ನು ನಾವೆಲ್ಲರೂ ಆದರ್ಶವಾಗಿ ಇಟ್ಟುಕೊಳ್ಳಬೇಕು.ಅವರು ಪುಸ್ತಕಗಳನ್ನು ಓದುವಾಗ ತಲೆತಗ್ಗಿಸಿ ಓದಬೇಕು ಏಕೆಂದರೆ ಅದು ತಲೆ ಎತ್ತಿ ನಡೆಯಲು ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ ಅದು ಅಕ್ಷರಶಃ ಸತ್ಯ ಎಂದರು.
ಪುಸ್ತಕಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಬೇಡ.ಪುಸ್ತಕ ಯೋಗ ಎಲ್ಲಕ್ಕಿಂತ ದೊಡ್ಡ ಯೋಗ.ಈಗ ಪುಸ್ತಕ ಯಜ್ಞ ನಡೆಯಬೇಕಿದೆ.ಅಂದರೆ ಓದುವ ಕ್ರಾಂತಿಯಾಗಬೇಕೆಂದು ತಿಳಿಸಿ ಪುಸ್ತಕ ಪ್ರಾಧಿಕಾರದ ಈ ಯೋಜನೆಗೆ ಶುಭವಾಗಲಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷರಾದ ಕೆ.ದೀಪಕ್ ಮಾತನಾಡಿ ನಮ್ಮ ಸಂಘದ ಮೇಲಂತಸ್ತಿನ ಕಟ್ಟಡದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ.ಪತ್ರಕರ್ತರಾಗಿರುವ ನಮಗೆ ಓದುವ ಅಭ್ಯಾಸ ಬಹಳ ಮುಖ್ಯ.ಮನುಷ್ಯನಿಗೆ ಸ್ನೇಹ ಬಹಳ ಮುಖ್ಯ ಆದರೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವಾಗಬಾರದು.ಎಷ್ಟೇ ದೀರ್ಘಕಾಲದ ಗೆಳೆತನವಿದ್ದರೂ ಒಂದಲ್ಲಾ ಒಂದು ದಿನ ಅವರಿಂದಲೂ ವಿಶಾವಾಸಘಾತುಕ ಕೆಲಸಗಳಾಗಿ ಬಿಡುತ್ತವೆ.ಆದ್ದರಿಂದ ಅದು ಕೂಡ ಶಾಶ್ವತವಲ್ಲ ಆದರೆ ಪುಸ್ತಕ ಸ್ನೇಹ ಮಾಡಿದರೆ ಅದು ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ.ಅದರಿಂದ ನಮಗೆ ಮೋಸ ಹೋಗುವ,ವಿಶ್ವಾಸಘಾತುಕ ಕೆಲಸಗಳೂ ಎಂದಿಗೂ ಆಗುವುದಿಲ್ಲ ಎಂದು ಪುಸ್ತಕ ಹಾಗೂ ಸ್ನೇಹ ಸಂಬಂಧದ ಬಗ್ಗೆ ವಿವರಿಸಿದರು.
ಓದುವ ಹಾಗೂ ಬರೆಯುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದ್ದು ಬದಲಿಗೆ ಬೆಂಕಿ ಹಚ್ಚುವ,ತಂದಿಡುವವರ ಸಂಖ್ಯೆಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇಲ್ಲಿಯವರೆವಿಗೂ ನಮ್ಮ ಪತ್ರಕರ್ತರು ಯಾರೂ ಸಹ ಗ್ರಂಥಾಲಯ ಮಾಡಬೇಕೆಂಬ ಸಲಹೆ ನೀಡಿರಲಿಲ್ಲ.ಪತ್ರಕರ್ತರ ಸಂಘದಲ್ಲಿ ಗ್ರಂಥಾಲಯ ಸ್ಥಾಪನೆ ಓದುವ ಮನಸ್ಸುಗಳಿಗೆ ಅತ್ಯಂತ ಹೆಚ್ಚು ಉಪಯೋಗವಾಗಲಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ತಮ್ಮ ಜೀವಿತಾವಧಿಯಲ್ಲಿ ಪುಸ್ತಕಗಳ ನಡುವೆ ಬದುಕಿ,ಪುಸ್ತಕಗಳ ನಡುವೆ ಪ್ರಾಣ ಬಿಟ್ಚ ಮಹಾನ್ ಮಾನವತಾವಾದಿ.ಇಂದು ಮನುಷ್ಯ ಆರ್ಟಿಫಿಶಿಯಲ್ ಕಡೆ ಹೆಚ್ಚು ಗಮನ ನೀಡುತ್ತಾ ಓದುವ ಅಭ್ಯಾಸವನ್ನು ಸಂಪೂರ್ಣ ಮರೆಯುತ್ತಿದ್ದಾನೆ.ನಮ್ಮ ಕೈಯಲ್ಲಿ ಮೊಬೈಲ್ ಒಂದಿದ್ದರೆ ಸಾಕು ಮತ್ತೇನು ಬೇಡ ಎಂಬ ಮನಸ್ಥಿತಿಗೆ ಬಂದಿರುವುದು ಅತ್ಯಂತ ಶೋಚನೀಯ ಎಂದರು.
ಅಂಬೇಡ್ಕರ್ ರವರನ್ನು ಜೀವಂತ ನೋಡಬೇಕೆಂದರೆ ಅವರು ಬರೆದಿರುವ ಪುಸ್ತಕಗಳನ್ನು ಓದಬೇಕು.ಅವರೂ ಸಹ ಇದೇ ಮಾತನ್ನು ಹೇಳಿದ್ದಾರೆ.ನನ್ನನ್ನು ಪ್ರತಿಮೆಗಳಲ್ಲಿ ಕಾಣಬೇಡಿ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿ ಅದರಲ್ಲಿ ನನ್ನನ್ನು ಕಾಣಬಹುದೆಂದು ಹೇಳಿ ಹೋಗಿದ್ದಾರೆಂದು ಸ್ಮರಿಸಿ ಯಾವುದೇ ಊರುಗಳಲ್ಲಿ ಅಂಬೇಡ್ಕರ್ ರವರ ಪ್ರತಿಮೆ ಮಾಡುವ ಮೊದಲು ಗ್ರಂಥಾಲಯ ಸ್ಥಾಪಿಸುವುದು ಬಹಳ ಮುಖ್ಯವಾಗುತ್ತದೆ.ಆ ಮೂಲಕ ಜ್ಞಾನವನ್ನು ಸಂಪಾದಿಸಲು ಸಹಾಯಕವಾಗುತ್ತದೆಂದರು.
ಇದೇ ಸಂದರ್ಭದಲ್ಲಿ ಜಾಗೃತಿ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಿ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ನಗರದಿಂದ ಆಗಮಿಸಿದ್ದ 25 ಶಾಲೆಯ ಮುಖ್ಯೋಪಾಧ್ಯಾಯರುಗಳಿಗೆ ಪುಸ್ತಕವನ್ನು ವಿತರಿಸಿ, ಪತ್ರಕರ್ತರ ಸಂಘಕ್ಕೂ ಕೂಡ ಪುಸ್ತಕ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಧರ್ಮಾಪುರ ನಾರಾಯಣ್,ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಎನ್.ಕರಿಯಪ್ಪ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.
- ಎಂ. ನಾಗೇಂದ್ರ ಕುಮಾರ್, ವರದಿಗಾರರು .
