ಚಾಮರಾಜನಗರ:- ಬುದ್ದ, ಬಸವ, ಅಂಬೇಡ್ಕರ್ ಈ ಮೂವರು ದಾರ್ಶನಿಕರು ಮಾನವ ಕುಲದ ಒಳಿತಿಗಾಗಿ ದುಡಿದ ಮಹಾನ್ ಚಿಂತಕರು, ಸಮಾಜ ಸುಧಾರಕರು ಹಾಗೂ ಆದರ್ಶ ಪುರುಷರು ಆಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿಂದು ಚಾಮರಾಜನಗರ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತೋತ್ಸವ ಮತ್ತು ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಬುದ್ದ ಅವರು ಸಮಾಜದಲ್ಲಿನ ಜನರು ಅಂಧಕಾರದಲ್ಲಿ ಮುಳುಗಿದ್ದಾಗ ಜ್ಞಾನದ ಬೆಳಕು ಚೆಲ್ಲಿದರು. ಆಸೆಯನ್ನು ಬಿಟ್ಟವರು ಇಡೀ ಜಗತ್ತನ್ನು ಗೆಲ್ಲಬಹುದು ಎಂಬುದು ಬುದ್ದನ ಚಿಂತನೆಯಾಗಿದೆ. ೧೨ನೇ ಶತಮಾನದಲ್ಲಿ ನವಸಮಾಜ ನಿರ್ಮಿಸಲು ಹೊರಟವರಲ್ಲಿ ಬಸವಣ್ಣನವರು ಪ್ರಮುಖರಾಗಿದ್ದಾರೆ. ಇಂದು ಸಮಾಜದಲ್ಲಿ ಕಾಣುವ ಪ್ರಜಾಪ್ರಭುತ್ವವನ್ನು ೮೫೦ ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ತೋರಿಸಿದರು. ಸಾಮಾನ್ಯ ಜನರಿಗೂ ಸಹ ಅರ್ಥವಾಗುವ ರೀತಿ ತಮ್ಮ ವಚನಗಳ ಮೂಲಕ ಪ್ರಗತಿಪರ ಚಿಂತನೆಗಳನ್ನು ಮೂಡಿಸಿದರು ಎಂದರು.

ಜ್ಞಾನದ ಸಂಕೇತವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಬೃಹತ್ ಜನಪರ ಪ್ರಜಾಪ್ರಭುತ್ವ ರಚನೆಯಾಗಿದೆ. ಅಂಬೇಡ್ಕರ್ ಅವರು ರಾಜನೀತಿ ಶಾಸ್ತçಜ್ಞರಾಗಿ, ತತ್ವ ಜ್ಞಾನಿಯಾಗಿ, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡು ಯುವ ಸಮುದಾಯಕ್ಕೆ ಆದರ್ಶ ಪುರುಷರಾಗಿದ್ದಾರೆ. ಅಂಬೇಡ್ಕರ್ ಅವರು ಕಾಲ ಹರಣ ಮಾಡದೇ ಸತತ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಅನೇಕ ಪದವಿ ಪಡೆದು ವಿಶ್ವ ಜ್ಞಾನಿಯಾಗಿದ್ದಾರೆ. ಅವರ ಚಿಂತನೆಗಳನ್ನು ಪಾಲಿಸಿ ಉನ್ನತ ಗುರಿ ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವ ವಿದ್ಯಾನಿಲಯದ ಪ್ರೊ. ಎಂ.ಆರ್. ಗಂಗಾಧರ್ ಅವರು ವಿವಿಧ ಸಾಂಸೃತಿಕ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಬಳಿಕ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಪ್ರತಿಯೊಬ್ಬ ನಾಗರಿಕರಿಗೂ ಅವಶ್ಯಕವಾಗಿದೆ. ಮಹಾನೀಯರ ಸಾಮಾಜಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಸಂಸ್ಕಾರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಅಂತಾರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ೨೦೨೫ರ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸೈಬರ್ ಭದ್ರತಾ ವಿಭಾಗದ ಡಿ.ವೈ.ಎಸ್.ಪಿ. ಪವನ್ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳ ಗುರಿಯು ಯಾವಾಗಲೂ ಉನ್ನತವಾಗಿರಬೇಕು. ಮಾದಕ ವಸ್ತು ಎಂಬುದು ಮಾನವನ ನರಮಂಡಲ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತಿದ್ದು ಅತೀ ಹೆಚ್ಚಾಗಿ ಯುವ ಸಮೂಹವು ವ್ಯಸನಕ್ಕೆ ಬಲಿಯಾಗುತ್ತಿದೆ. ಮರಣಹೊಂದುವ ವ್ಯಸನಿಗಳಲ್ಲಿ ಶೇ ೫.೭ ರಷ್ಟು ಜನರು ೧೬ ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿರುವುದು ದುಃಖಕರ ಸಂಗತಿ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಆಡಳಿತ ಕುಲಸಚಿವರಾದ ಆರ್. ಲೋಕನಾಥ್, ಮೌಲ್ಯಮಾಪನ ಕುಲಸಚಿವರಾದ ಜಿ.ವಿ, ವೆಂಕಟರಮಣ, ಓ.ಎ.ಎಂ. ಬ್ಲಷ್ಪ್ರಿಂಗ್ ಎಂಟರ್ಪ್ರೈಸಸ್ ಲಿ. ವ್ಯವಸ್ಥಾಪಕರಾದ ಬಿ.ಪಿ. ವೆಂಕಟೇಶ್ ಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
– ಶ್ರೀ ಸಾಯಿ ಎಸ್ ಮಂಜು
