ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರ ಹಾಗೂ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಮೆರವಣಿಗೆಯಲ್ಲಿ ಸಾಗಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದರು ಆಗಮಿಸಿ ಕೆಲಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಚಾರ ಮಿತಿಮೀರಿದ್ದು ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ವಿಪರೀತ ಮಳೆ ಕಾರಣ ರೈತರು ಹಾಗೂ ಜನರು ಸಂಕಷ್ಟಕ್ಕೀಡಾದರೂ ಸರ್ಕಾರದಿಂದ ಪರಿಹಾರ ಕ್ರಮ ಆಗುತ್ತಿಲ್ಲ ಕೇವಲ ಸಿಎಂ ಕುರ್ಚಿಗಾಗಿ ಪ್ರತಿದಿನ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಒಂದುವರೆ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರು ಆದರೆ ಇಂದು ಕೇವಲ ಎಂಟು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆಯಲು ಮುಂದಾದ ರೈತರಿಗೆ ಆ ಬೆಳೆಯಿಂದಲೂ ನಷ್ಟ ಅನುಭವಿಸುವಂತಾಗಿದೆ.
ಮೆಕ್ಕೆಜೋಳ ಬೆಳೆ ಬಿಳಿ ಸುಳಿ ರೋಗಕ್ಕೆ ತುತ್ತಾಗಿದ್ದು ರೈತರಿಗೆ ಪರಿಹಾರ ಒದಗಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.
ಹಿಂದಿನ ಸರ್ಕಾರ ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಲಾಗಿತ್ತು, ಮನೆ ಕುಸಿತಕ್ಕೆ ಸೂಕ್ತ ಪರಿಹಾರವನ್ನು ಘೋಷಣೆ ಮಾಡಿದ್ದರು. ಆದರೆ ಈ ಸರ್ಕಾರದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದ್ದು ಸಚಿವರ ಎಲ್ಲ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವಲ್ಲಿಯೇ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಕುಸಿದು ಹೋಗಿದ್ದು ಪೊಲೀಸ್ ಠಾಣೆಗಳಲ್ಲಿ ಬಡವರ ದೂರು ಕೇಳುವವರೇ ಇಲ್ಲ ಸಾರ್ವಜನಿಕರು ದೂರು ನೀಡಲು ಹೋದರೆ ದಬ್ಬಾಳಿಕೆ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ರಾಜಿ ಪಂಚಾಯಿತಿಯನ್ನು ಸಹ ಮಾಡುತ್ತಿದ್ದಾರೆ. ಓರ್ವ ಮಾಜಿ ಸೈನಿಕನಿಗೂ ಸಹ ಈ ರೀತಿಯ ಅನುಭವ ಆಗಿದ್ದು ಈ ರೀತಿಯ ದುರಾವಸ್ಥೆ ಜಿಲ್ಲೆಯಲ್ಲಿ ಮುಂದುವರೆದಿದೆ ಎಂದು ಕಿಡಿಕಾರಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ ರಾಜ್ಯ ಸರ್ಕಾರದಿಂದ ಶಾಸಕರಿಗೆ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ, ಸ್ವಪಕ್ಷದ ಶಾಸಕರಿಗೂ ಅನುದಾನ ಬಿಡುಗಡೆ ಮಾಡದ ಕಾರಣ ಅವರು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಸತಿ ಇಲಾಖೆಯಲ್ಲಿ ಬಾರಿ ಭ್ರಷ್ಟಚಾರ ನಡೆದಿದ್ದು ಹಣ ಪಡೆದು ಬಡವರಿಗೆ ಮನೆ ನೀಡುವಂತಹ ಕೆಟ್ಟ ಆಡಳಿತ ಕಾಂಗ್ರೆಸ್ ಸರ್ಕಾರದಿಂದ ಕಾಣಬಹುದಾಗಿದೆ ಎಂದು ದೂರಿದರು.
ಶಾಸಕ ಎ.ಮಂಜು ಮಾತನಾಡಿ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಡವರಿಗೆ ಮನೆ ವಿತರಣೆ ಮಾಡುವಲ್ಲಿಯೂ ಸರ್ಕಾರ ಲೋಪವೆಸಗಿದ್ದು ತಲಾ ಒಂದು ಮನೆಗೆ 10ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಯಾರು ಶಾಶ್ವತ ಅಲ್ಲ ನಮ್ಮ ಅವಧಿಯಲ್ಲಿ ಏನು ಒಳ್ಳೆಯ ಕೆಲಸ ಮಾಡುತ್ತೀವಿ ಅದೇ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ತಾಲೂಕಿನ 50 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 16 ಪಂಚಾಯಿತಿಗಳಿಗೆ ಮಾತ್ರ ಮನೆ ಮಂಜೂರಾತಿ ಮಾಡಲಾಗಿದೆ. ಅದು ಕೂಡ ಹಣ ನೀಡಿದವರಿಗೆ ಮಾತ್ರ ಮಂಜೂರಾತಿ ನೀಡಲಾಗಿದೆ ಎಂದು ಆರೋಪಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಬೆಳೆನಾಶ ಸೇರಿದಂತೆ ನೂರಾರು ಮನೆಗಳು ಬಿದ್ದಿವೆಇದುವರೆಗೂ ಸಹ ಸರ್ಕಾರದಿಂದ ಸಮರ್ಪಕ ಪರಿಹಾರ ಬಿಡುಗಡೆಯಾಗಿಲ್ಲ. ರಸ್ತೆಗಳು ಗುಂಡಿಮಯವಾಗಿದ್ದು ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಶೂನ್ಯ ಆಡಳಿತ ನೋಡುವಂತಾಗಿದೆ. ಭ್ರಷ್ಟಚಾರ ತುಂಬಿತುಳುಕುತ್ತಿದ್ದು ಮುಡಾ, ವಾಲ್ಮೀಕಿ ಹಗರಣ ಮುಚ್ಚಿ ಹಾಕಿದ್ದಾರೆ ಕಮಿಷನ್ ದಂಧೆ ವಿರುದ್ಧ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಅದೇ ಕಮಿಷನ್ ದಂಧೆಯಲ್ಲಿ ಮುಳುಗಿ ಹೋಗಿದೆ ಎಂದು ಆರೋಪಿಸಿದರು.

ದಿನಬೆಳಗಾದರೆ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆಯಾಗುತ್ತದೆ ಆದರೆ ಬಡವರಿಗೆ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದು ಬಡವರಿಗೆ ವಿತರಣೆ ಮಾಡುವ ಮನೆಯಲ್ಲಿಯೂ ಕಮಿಷನ್ ದಂಧೆ ನಡೆಯುತ್ತಿದೆ. ಸಚಿವ ಜಮೀರ್ ಅಹ್ಮದ್ ಏಜೆಂಟ್ಗಳ ಮೂಲಕ ಹಣ ವಸೂಲಿ ಮಾಡಿ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡರಾದ ಎನ್. ಆರ್ ಸಂತೋಷ್, ಸೋಮನಹಳ್ಳಿ ನಾಗರಾಜ್, ಸಮೀರ್ ಅಹಮದ್, ಜಯರಾಮ್, ಎಸ್.ದ್ಯಾವೇಗೌಡ, ಮಂಜೇಗೌಡ, ಚಂದ್ರಶೇಖರ್, ದೇವರಾಜೇಗೌಡ, ಪುಟ್ಟಸ್ವಾಮಪ್ಪ, ಸಂಗಮ್, ಕಮಲ್ ಕುಮಾರ್, ಗಿರೀಶ್ ಚನ್ನವೀರಪ್ಪ, ಪಕ್ಷದ ವಕ್ತಾರ ರಘು ಹೊಂಗೆರೆ, ನಗರಸಭೆ ಉಪಪೌರರಾದ ಹೇಮಲತಾ ಇತರರು ಇದ್ದರು.
