ಹಾಸನ, ಜುಲೈ 3, 2025: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜುಲೈ 3 ಮತ್ತು 4, 2025 ರಂದು ಹಾಸನ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತವು ಭಾರಿ ಮಳೆಯಾಗುವ ಸಂಭವವಿರುವ ಪ್ರದೇಶಗಳಲ್ಲಿನ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಎಚ್ಚರಿಕೆಯಲ್ಲಿ ಜಿಲ್ಲೆಯ ಕೆರೆ, ಕಟ್ಟೆ, ನದಿ ಪಾತ್ರಗಳ ಹತ್ತಿರ ಜನರು ತಂಗದಂತೆ ಹಾಗೂ ಜಾನುವಾರುಗಳನ್ನು ಬಿಟ್ಟಿಡದಂತೆ ಕೋರಲಾಗಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ನದಿಪಾತ್ರ ಪ್ರದೇಶದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಇದನ್ನು ಓದಿ: ಅತಿವೇಗದ ವಾಹನ ಚಾಲನೆಯಿಂದ ಉಂಟಾಗುವ ಸಾವಿಗೆ ವಿಮಾ ಸಂಸ್ಥೆ ಪರಿಹಾರ ನೀಡಬೇಕಾಗಿಲ್ಲ: ಸುಪ್ರೀಂ ಕೋರ್ಟ್
ಗುಡ್ಡ ಕುಸಿತ ಸಾಧ್ಯತೆ: ಹಾಸನ ಜಿಲ್ಲೆಯಲ್ಲಿ ಕೆಲವೆಡೆ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ, ಆತುರದ ಪ್ರಯಾಣ ಅಥವಾ ಅಸುರಕ್ಷಿತ ಪ್ರದೇಶಗಳಿಗೆ ತೆರಳಬಾರದು ಎಂದು ಸೂಚಿಸಲಾಗಿದೆ.
ತುರ್ತು ಸಹಾಯಕ್ಕಾಗಿ ಸಂಪರ್ಕಿಸಿ:
-
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಂಖ್ಯೆ: 08172-261111
-
ಉಚಿತ ಸಹಾಯವಾಣಿ: 1077
ಹಾಸನ ಜಿಲ್ಲೆಯ ಯಾವುದೇ ಭಾಗದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರು ಈ ಮೂಲಕ ವಿನಂತಿಸಿದ್ದಾರೆ.
