ಭಗವದ್ಗೀತೆ ಅಧ್ಯಾಯ – 3 (ಕರ್ಮ ಯೋಗ)
ಶ್ಲೋಕ – 26
ನ ಬುದ್ಧಿಭೇದಂ ಜನಯೇದಜ್ಞಾನಾಮ್ ಕರ್ಮಸಂಗಿನಾಮ್ ।
ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥೨೬॥
ತಿಳುವಳಿಕೆಯಿಲ್ಲದೆ ಫಲದ ನಂಟಿಗಾಗಿಯೇ ಕರ್ಮ ಮಾಡುವ ಮಂದಿಯ ನಂಬಿಕೆಯನ್ನು ನಲುಗಿಸಬಾರದು.
ಉಪಾಯ ಬಲ್ಲ ತಿಳಿದವನು ತಾನು ಎಲ್ಲಾ ಕರ್ಮಗಳನ್ನು ಮಾಡುತ್ತ ಅವರನ್ನು ಒಲೈಸಬೇಕು.
ಭಾವಾರ್ಥ
ಸಮಾಜದಲ್ಲಿ ಅನೇಕ ತರದ ಜನರಿರುತ್ತಾರೆ. ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ. ಅವರು ಅವರ ನಂಬಿಕೆಗೆ ತಕ್ಕಂತೆ ನೆಡೆದುಕೊಳ್ಳುತ್ತಿರುತ್ತಾರೆ. ತಿಳಿದವನಿಗೆ ಅದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಎಂದೂ ಒಮ್ಮೆಗೆ ಹೋಗಿ ಅಂತಹ ಜನರನ್ನು ಪರಿಹಾಸ್ಯ ಮಾಡಬಾರದು. ಒಬ್ಬ ಒಂದು ಕಲ್ಲನ್ನು ಅದಕ್ಕೊಂದು ಹೆಸರನ್ನು ಕೊಟ್ಟು ದೇವರೆಂದು ಪೂಜಿಸುತ್ತಿರಬಹುದು. ಆತನ ಅಪಾರ ನಂಬಿಕೆ ಶರಣಾಗತಿ ಆತನನ್ನು ರಕ್ಷಿಸುತ್ತಿರುತ್ತದೆ. ಇದನ್ನು ನೋಡಿ ಪರಿಹಾಸ್ಯ ಮಾಡುವುದು ಮೂಢತನ.
ಅವರು ಇಂತಹ ನಂಬಿಕೆಯ ನೆಲಗಟ್ಟಿನಲ್ಲಿ ಜೀವನದಲ್ಲಿ ಭರವಸೆಯಿಂದ ಬದುಕುತ್ತಿರುತ್ತಾರೆ.ಅವರಿಗೊಂದು ಸನಾತನ ಪ್ರಜ್ಞೆ ಇರುತ್ತದೆ. ಸರ್ವಗತ, ಸರ್ವಶಬ್ದವಾಚ್ಯ ಹಾಗು ಸರ್ವಶಕ್ತ ಭಗವಂತ ಆತನಿಗೆ ಕಲ್ಲಿನ ಮುಖೇನ ರಕ್ಷಣೆ ಕೊಡಲೂ ಸಾಧ್ಯವಿದೆಯಲ್ಲವೇ? ಆದ್ದರಿಂದ ಎಂದೂ ಅಂತವರನ್ನು ನೋಡಿ ನಗಬಾರದು. ಅದನ್ನು ಬಿಟ್ಟು ಅವನನ್ನು ಕ್ರಮೇಣವಾಗಿ ಜ್ಞಾನದ ಪರಿದಿಗೆ ತರುವ ಪ್ರಯತ್ನವನ್ನು ಮಾಡಬೇಕು. ಎಲ್ಲವನ್ನು ಸಾಮಾಜಿಕ ಕಾಳಜಿಯಿಂದ ಮಾಡಬೇಕು, ಆದರೆ ನಿರ್ಲಿಪ್ತನಾಗಿ ಎಲ್ಲಾ ಕರ್ಮವನ್ನು ಮಾಡುತ್ತಾ ಅಜ್ಞಾನಿಗಳಲ್ಲಿ ಜ್ಞಾನವನ್ನು ತುಂಬಬೇಕು.
ವಿವರಣೆ:
ಈ ಶ್ಲೋಕವು “ಲೋಕಸಂಗ್ರಹ”ದ (ಸಮಾಜಿಕ ಸಮತೋಲನ) ತತ್ವವನ್ನು ಒತ್ತಿ ಹೇಳುತ್ತದೆ. ಜ್ಞಾನಿ ಅಥವಾ ತತ್ತ್ವಬೋಧಿಯಾಗಿರುವವನು ಕರ್ಮದ ಪರಮಾರ್ಥವನ್ನು ಅರಿತಿದ್ದರೂ, ಇತರರ ನಂಬಿಕೆಗೆ ಧಕ್ಕೆ ಉಂಟುಮಾಡಬಾರದು. ಬದಲಾಗಿ, ತಾನು ಕೂಡ ಕರ್ಮದಲ್ಲಿ ತೊಡಗಿಸಿಕೊಂಡು, ತನ್ನ ನಡೆಗಳಿಂದ ಇತರರಿಗೆ ಪ್ರೇರಣೆಯುಂಟುಮಾಡಬೇಕು. ಜ್ಞಾನಿ ಎಂದರೆ ಬೋಧಿಸುವವನು ಮಾತ್ರವಲ್ಲ, ಮಾಡಿದಾಗಲೇ ಬೋಧನೆ ನಿಭಾಯಿಸಬಲ್ಲವನು.
ಇದು ಭಾಗವತಧರ್ಮದ ಸೂಕ್ಷ್ಮ ನೈತಿಕ ತತ್ವ – ಜ್ಞಾನ ಮತ್ತು ಕರ್ಮದ ಹದವಾದ ಸಂಯೋಜನೆಯ ಮಾತು.

[…] ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಿಂದ(ಭಗವದಧೀನವಾದ, ಜೀವನ ಸ್ವಭಾವ ಸಹಜವಾದ ಗುಣಗಳಿಂದ) ಎಲ್ಲ ಬಗೆಯ ಕರ್ಮಗಳೂ ನಡೆಯುತ್ತಿರುತ್ತವೆ. ಹಮ್ಮಿನಿಂದ ಮೈಮರೆತವನು ‘ನಾನೇ ಮಾಡಿದೆ‘ ಎಂದು ತಿಳಿಯುತ್ತಾನೆ. ಈ ಶ್ಲೋಕ ಅನೇಕ ವಿಧದಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಕೃಷ್ಣ ಮುಖ್ಯವಾಗಿ ‘ನಾನೇ ಮಾಡಿದೆ‘ ಎಂದು ಅಹಂಕಾರ ಪಡುವುದು ಎಷ್ಟು ತಪ್ಪು ಮತ್ತು ಏಕೆ ಎನ್ನುವುದನ್ನು ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ “ಯಾರಾದರು ಏನನ್ನಾದರು ‘ನಾನೇ ಮಾಡಿದೆ‘ ಎಂದು ತಿಳಿದುಕೊಂಡರೆ ಅದು ಅವನ ತಿಳಿಗೇಡಿತನ” ಎಂದು. ಸೃಷ್ಟಿಯಲ್ಲಿನ ಒಂದು ವಿಚಿತ್ರವೆಂದರೆ ಯಾರೂ ಏನನ್ನೂ ಮಾಡುವುದಿಲ್ಲ-ಆದರೆ ಎಲ್ಲವೂ ಎಲ್ಲರ ಕೈಯಿಂದ ಆಗುತ್ತಿರುತ್ತದೆ! ಈ ದೇಹ (ಪಿಂಡಾಂಡ) ಪ್ರಕೃತಿಯ ನಿರ್ಮಾಣ. ಪ್ರಕೃತಿಯಲ್ಲಿ ಅದಕ್ಕೆ ಪೋಷಕವಾದ ಅಂಗಭೂತವಾದ ಇಂದ್ರಿಯಗಳಿವೆ. ಪ್ರಕೃತಿ ಎಂದರೆ ಈ ದೇಹ, ಅದರ ಗುಣಗಳು ಎಂದರೆ ಇಂದ್ರಿಯಗಳು. ಶಬ್ದ-ಸ್ಪರ್ಶ-ರಸ-ರೂಪ- ಗಂಧ; ಕಿವಿ-ತೊಗಲು-ನಾಲಿಗೆ-ಕಣ್ಣು-ಮೂಗು; ಅದಕ್ಕೆ ಅನುಗುಣವಾಗಿ ಆಕಾಶ(ಶಬ್ದ), ಗಾಳಿ(ಸ್ಪರ್ಶ), ನೀರು(ರಸ), ಅಗ್ನಿ (ರೂಪ), ಮತ್ತು ಮಣ್ಣು(ಗಂಧ) ಇವು ಪ್ರಕೃತಿಯ ಗುಣಗಳು. ಹೀಗಿರುವಾಗ ನಾವು ಯಾವುದೋ ಒಂದು ವಿಷಯವನ್ನು ನಾನೇ ಮಾಡಿದೆ ಎಂದು ಹೇಳುವುದು ಅರ್ಥ ಶೂನ್ಯ. ಉದಾಹರಣೆಗೆ ‘ಕಣ್ಣಿನಿಂದ ನೋಡಿದೆ‘; ಈ ಕಣ್ಣನ್ನು ನಮಗೆ ಕೊಟ್ಟವನು ಯಾರು? ಹುಟ್ಟು ಕುರುಡನಿಗೆ ಕಣ್ಣು ಕೊಡಲು ನಿನಗೆ ಸಾಧ್ಯವೇ? ಅಂದರೆ ಕಣ್ಣು ಪ್ರಕೃತಿಯ ಕೊಡುಗೆ. ಭಗವಂತ ನಮಗೆ ಕಣ್ಣು ಕೊಟ್ಟ, ಕಣ್ಣ ಮುಂದೆ ನೋಡುವ ವಸ್ತುವನ್ನಿಟ್ಟ, ನೋಡುವಂತೆ ಪ್ರೇರೇಪಿಸಿದ- ನಾವು ನೋಡಿದೆವು! ಒಂದು ವೇಳೆ ನಮಗೆ ಒಳ್ಳೆಯ ಸ್ವರವಿದ್ದರೆ ಅದಕ್ಕಾಗಿ ಅಹಂಕಾರ ಪಡುತ್ತೇವೆ. ಆದರೆ ಈ ಸ್ವರವನ್ನು ನಮಗೆ ಕೊಟ್ಟವನು ಯಾರು? ಈ ಬಗ್ಗೆ ಎಂದೂ ನಾವು ಯೋಚಿಸುವುದಿಲ್ಲ. ಒಂದು ಕಾರ್ಯವಾಗಬೇಕಾದರೆ ಇಡೀ ವಿಶ್ವದ ಅನೇಕ ಘಟಕಗಳು ಸೇರಿ ಕಾರ್ಯ ನಿರ್ವಹಿಸಬೇಕು. ಪ್ರಕೃತಿ ಜಡ ಅದಕ್ಕೆ ಇಚ್ಛೆ ಇಲ್ಲ. ‘ನಾವು ಮಾಡುವುದು‘ ಅಂದರೆ ಇಚ್ಛಿಸಿ ಮಾಡುವುದು. ನಮಗೆ ಇಚ್ಛೆ ಇದೆ; ಪ್ರತಿಯೊಬ್ಬ ಜೀವನಿಗೂ ಅವನದೇ ಆದ ಜೀವ ಸ್ವಭಾವವಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯ ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ಇದು ಇಚ್ಛಾ ಪೂರ್ವಕ ಕ್ರಿಯೆ. ಆದರೆ ಇಲ್ಲಿ ನಮಗೆ ಇಚ್ಛಾ ಸ್ವಾತಂತ್ರ್ಯವಿಲ್ಲ. ಇಚ್ಛಾಸ್ವಾತಂತ್ರ್ಯ ಇರುವುದು ಕೇವಲ ಭಗವಂತನಲ್ಲಿ. ಅದಕ್ಕನುಗುಣವಾಗಿ ಸರ್ವಕಾರ್ಯ ನಿರ್ವಹಣೆ ಆಗುತ್ತದೆ. ಆದ್ದರಿಂದ ನಮ್ಮ ಸ್ವಭಾವವನ್ನು ನಿಯಂತ್ರಿಸುವವ ಇಡೀ ಜಗತ್ತಿನ ಮೂಲ ಕರ್ತೃ ಭಗವಂತ. ಅವನ ಇಚ್ಛೆಗನುಗುಣವಾಗಿ ಪ್ರಪಂಚದ ವ್ಯಾಪಾರ ನಡೆಯುತ್ತದೆ. ಇದು ವಿಶ್ವದ ವ್ಯವಸ್ಥೆ. ಇಡೀ ವಿಶ್ವದ ಕರ್ಮ ಚಕ್ರದಲ್ಲಿ ನಾವು ಒಂದು ಘಟಕ ಅಷ್ಟೆ. ಆದ್ದರಿಂದ ‘ನಾನೇ ಮಾಡಿದೆ‘ ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಜವಾದ ಕರ್ತೃ ಭಗವಂತ. ಜೀವನಿಗೊಂದು ಕರ್ತೃತ್ವ ಹಾಗು ಜಡಕ್ಕೊಂದು ಕರ್ತೃತ್ವವಿದೆ. ಇದರ ಅಂತರ ನಮಗೆ ತಿಳಿದಿರಬೇಕು. ಮಣ್ಣು ಜಡ ಅದಕ್ಕೆ ಇಚ್ಛೆ ಇಲ್ಲ. ಬೀಜ ಚೇತನ, ಅದಕ್ಕೆ ಮರವಾಗುವ ಸ್ವಭಾವವಿದೆ ಆದರೆ ಸ್ವಾತಂತ್ರ್ಯವಿಲ್ಲ. ಬೀಜವನ್ನು ಬಿತ್ತಿ ಬೆಳೆಸುವ ತೋಟಗಾರ ಆ ಭಗವಂತ. ಭಗವಂತನ ಇಚ್ಛೆಗನುಗುಣುವಾಗಿ, ‘ಜೀವ’ ನಲ್ಲಿರುವ ಸ್ವಭಾವಕ್ಕನುಗುಣವಾಗಿ ಪ್ರಪಂಚದಲ್ಲಿ ಕ್ರಿಯೆ ನಡೆಯುತ್ತದೆ. ಒಂದು ಕ್ರಿಯೆಯ ಹಿಂದೆ ಇಡೀ ವಿಶ್ವದ ಪಾಲುದಾರಿಕೆ ಇರುತ್ತದೆ. ಭಗವದ್ಗೀತೆ ಅಧ್ಯಾಯ – 3 (ಕರ್ಮ ಯೋಗ) ಶ್ಲೋಕ &#… […]