ಹಾಸನ: ಕರ್ನಾಟಕದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಮವಾರ ಹಾಸನದಲ್ಲಿ ಆನೆ ಕಾರ್ಯಪಡೆಯ ಸಮಗ್ರ ಥರ್ಮಲ್ ಡ್ರೋನ್ ಸ್ಕ್ವಾಡ್ ಯೋಜನೆಗೆ ಚಾಲನೆ ನೀಡಿದರು. ಆನೆ-ಮಾನವ ಸಂಘರ್ಷ ತೀವ್ರವಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳ ಚಲನವಲನವನ್ನು ನಿಖರವಾಗಿ ಗುರುತಿಸಿ, ತಕ್ಷಣದ ಎಚ್ಚರಿಕೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಥರ್ಮಲ್ ಡ್ರೋನ್ಗಳು ಮುಂಜಾನೆ ಮತ್ತು ರಾತ್ರಿ ಸಮಯಗಳಲ್ಲಿ ಕಾಡಾನೆಗಳ ಚಲನವಲನವನ್ನು ದಾಖಲಿಸಿ, ತಕ್ಷಣವೇ ಸಾರ್ವಜನಿಕರು ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿಯನ್ನು ಹಂಚಲಿವೆ. ಡ್ರೋನ್ ಸ್ಕ್ವಾಡ್ ವಾಹನದಲ್ಲಿ ಥರ್ಮಲ್ ಡ್ರೋನ್ ಜೊತೆಗೆ ಕಂಪ್ಯೂಟರ್ ಸಿಸ್ಟಮ್ ಅಳವಡಿಸಲಾಗಿದ್ದು, ಸ್ಥಳದಲ್ಲೇ ನೇರ ನಿಗಾ ವಹಿಸಿ ಕ್ರಮ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಹಾಸನ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಜಿಲ್ಲಾಧಿಕಾರಿ ಲತಾ ಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೋಹನ ವಿ.ಎಸ್. (ಹಾಸನ) ಮತ್ತು ಮಧುಸೂಧನ್ (ಸಕಲೇಶಪುರ) ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

“ಈ ಯೋಜನೆ ಸ್ಥಳೀಯರ ಜೀವ ಹಾಗೂ ಆಸ್ತಿಪಾಸ್ತಿಯನ್ನು ರಕ್ಷಿಸಲು ಮಹತ್ತರ ಪಾತ್ರ ವಹಿಸಲಿದೆ,” ಎಂದು ಸಚಿವ ಖಂಡ್ರೆ ಭರವಸೆ ವ್ಯಕ್ತಪಡಿಸಿದರು.
