ಚನ್ನರಾಯಪಟ್ಟಣ :- ಪಟ್ಟಣದ ಗಾಂಧಿ ವೃತ್ತದಲ್ಲಿರುವ ರಾಯರ ರಂಗಮಂದಿರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ರಾಯರ ರಂಗಮಂದಿರದ ಮುಖ್ಯಸ್ಥ ಎಂ.ಕೆ.ಪ್ರಕಾಶ ಅವರ ನೇತೃತ್ವದಲ್ಲಿ ಶ್ರೀರಾಯರಿಗೆ ವಿಶೇಷ ಪೂಜೆ, ಅಲಂಕಾರ ನೈವೇದ್ಯ, ಮಹಾ ಮಂಗಳಾರತಿ ಹಾಗೂ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಯಿತು. ಪೂರ್ವಾರಾಧನಾ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಲವು ಮಹಿಳಾ ಭಜನಾ ತಂಡಗಳಿಂದ ಭಕ್ತಿಗೀತೆಗಳ ಸಪ್ತಾಹ ನಡೆಯಿತು.
ಮುಖ್ಯಸ್ಥೆ ಡಾ. ಸ್ವಾತಿ ಭಾರದ್ವಾಜ್ ಅವರು, “ಪ್ರತಿನಿತ್ಯ ರಾಯರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ನಡೆಯುತ್ತಿದೆ. ಆಗಸ್ಟ್ 11ರಂದು ಮಧ್ವರಾಧನೆ ಹಾಗೂ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ. ಆಗಸ್ಟ್ 12ರಂದು ಉತ್ತರ ಆರಾಧನಾ ಮಹೋತ್ಸವ ನಡೆಯಲಿದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಕ್ತರಿಗೆ ಶ್ರೀ ಗುರುರಾಯರ ಬೆಳ್ಳಿ ಪಾದುಕೆಯ ದರ್ಶನ ಭಾಗ್ಯ ಕಲ್ಪಿಸಲಾಗಿದ್ದು, ಎಲ್ಲರೂ ದರ್ಶನ ಪಡೆದು ಕೃತಾರ್ಥರಾಗಬೇಕೆಂದು ಮುಖ್ಯಸ್ಥ ಪ್ರಕಾಶ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸಿ.ಕೆ. ಕುಸುಮರಾಣಿ, ಅಣತಿ ಶೇಖರಣ್ಣ, ಕಾಳೇನಹಳ್ಳಿ ಆನಂದ್ ಕುಮಾರ್ ಹಾಗೂ ಅನೇಕ ಗಣ್ಯರು ಭಾಗವಹಿಸಿ ರಾಯರ ದರ್ಶನ ಪಡೆದರು.
