ಹಾಸನ, ಆಗಸ್ಟ್ 12, 2025: ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಂದೆ ಗಂಗಾಧರನು ಹಣದ ವಿವಾದದಲ್ಲಿ ತಮ್ಮ ಮಗ ರಘುವನ್ನು (ವಯಸ್ಸು 32) ಹತ್ಯೆ ಮಾಡಿ, ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದಾನೆ..
ರಘು ವಿವಾಹ ವಿಚ್ಛೇದನ ಪಡೆದಿದ್ದು, ಗಂಗಾಧರನನ್ನು ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಜಗಳ ಮತ್ತು ತಾರಕಕ್ಕೆೇರಿದ ವಿವಾದದಲ್ಲಿ ಗಂಗಾಧರ ತನ್ನ ಮಗನನ್ನು ಕೊಲೆ ಮಾಡಿ ಮತ್ತೊಬ್ಬ ವ್ಯಕ್ತಿಯ ಸಹಕಾರದಿಂದ ಶವವನ್ನು ಇಂಗು ಗುಂಡಿಯಲ್ಲಿ ಹುತಿದ್ದಾನೆ.
ಇತ್ತೀಚೆಗೆ ಆರೋಪಿ ಗಂಗಾಧರನ ಸಾವಿನ ಸಂದರ್ಭ, ಸಂಬಂಧಿಕರು ರಘುವನ್ನು ಅಂತ್ಯಕ್ರಿಯೆಗೆ ಕರೆಸುವಂತೆ ಒತ್ತಾಯಿಸಿದಾಗ, ಗಂಗಾಧರನ ಇನ್ನೊಬ್ಬ ಮಗ ರೂಪೇಶ್ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಪಾಲಾಕ್ಷ್ ಎಂಬ ಸಂಬಂಧಿ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸ್ ತಂಡ ಭೇಟಿ ನೀಡಿ ಇಂಗು ಗುಂಡಿಯಿಂದ ಶವದ ಮೂಳೆಗಳನ್ನು ತೆಗೆಸಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲು ಮಾಡಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಆಘಾತ ಮೂಡಿಸಿದೆ.
