ಕೆ.ಆರ್.ಪೇಟೆ-ತಾಲೂಕು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪಿಸಿ ಕೆ.ಆರ್.ಪೇಟೆ ತಾಲೂಕು ರೈತ ಸಂಘ,ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ಭ್ರಷ್ಟರ ವಿರುದ್ಧ ಘೋಷಣೆ ಕೂಗುತ್ತಾ ತಾಲೂಕು ಮಿನಿ ವಿಧಾನಸೌಧಕ್ಕೆ ನೂರಾರು ರೈತರು ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.
ಕೆ.ಆರ್.ಪೇಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು, ಕೆಲ ಅಧಿಕಾರಿಗಳು ಲಂಚಾವತಾರದಲ್ಲಿ ಮುಳುಗಿರುವುದು ಬೇಸರದ ಸಂಗತಿ. ತಾಲೂಕು ಕಚೇರಿ,ಕೃಷಿ ಇಲಾಖೆ, ಕೆಇಬಿ,ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರೈತರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಕಚೇರಿಗಳಿಗೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಸರ್ವೇ ಮಾಡಿಸಲು, ಆರ್ಟಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ವರ್ಷಾನುಗಟ್ಟಲೆಯಿಂದ ಅಲೆದರೂ ರೈತರಿಗೆ ಕೆಲಸ ಆಗುತ್ತಿಲ್ಲ. ಇದರಿಂದ ರೈತರು ದೂರದ ಊರುಗಳಿಂದ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ವೇ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳು ಬಂದರೆ ಹಣ ಪಡೆದು ಕ್ಷಣಮಾತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಕೆಲಸಗಳನ್ನು ಮಾಡಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಬಳಿಕ ಮಾತನಾಡಿದ ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಕೆ ಆರ್ ಪೇಟೆ ತಾಲೂಕು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಕೇಂದ್ರ ಸ್ಥಳಗಳಾಗಿವೆ ರೈತರು, ಸಾರ್ವಜನಿಕರು ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾದ ದುಸ್ಥಿತಿ ಬಂದಿದೆ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇಂತಿಷ್ಟು ಹಣ ನೀಡಿದರೆ ಎಲ್ಲ ದಾಖಲೆಗಳನ್ನು ನೀಡುವ ಕೆಲ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಕೇಳಿದರೆ ಯಾವುದೇ ದಾಖಲೆಗಳು ಇಲ್ಲವೆಂದು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ರೈತ ಸಂಘದಿಂದ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಬದಲಾವಣೆ ಕಂಡಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದಿದ್ದಲ್ಲಿ ರೈತ ಸಂಘದಿಂದ ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಿಗೆರೆ ಜಯರಾಂ,ಜಿಲ್ಲಾ ಅಧ್ಯಕ್ಷ ಕೆಂಪುಗೌಡ,ಜಿಲ್ಲಾ ಉಪಾಧ್ಯಕ್ಷ ಮರವನಹಳ್ಳಿ ಶಂಕರ್, ಹಿರಿಯ ರೈತ ಮುಖಂಡ ಲಕ್ಷ್ಮಿಪುರ ಎಲ್.ಬಿ ಜಗದೀಶ್,ತಾಲ್ಲೂಕು ಕಾರ್ಯದರ್ಶಿ ಬೂಕನಕೆರೆ ನಾಗರಾಜು,ಕರೋಟಿ ತಮ್ಮಯ್ಯ,ಮಡುವಿನಕೋಡಿ ಪ್ರಕಾಶ್, ನೀತಿಮಂಗಳ ಮಹೇಶ್, ನಗರೂರು ಕುಮಾರ್, ಸಿಂದಘಟ್ಟ ಮಂಜು,ಚೌಡೇನಹಳ್ಳಿ ಕೃಷ್ಣೆಗೌಡ,ಆನೆಗೋಳ ಕಾರ್ ಮಂಜು,ಸಿಂಧಘಟ್ಟ ರವಿ, ಮಾಕವಳ್ಳಿ ಯೋಗೇಶ್,ಲಕ್ಷ್ಮಿಪುರ ನಾಗರಾಜು,ಮಾಕವಳ್ಳಿ ವಿಶ್ವನಾಥ್,ವಿಠಲಪುರ ಅರುಣ್,ಲಿಂಗಾಪುರ ರೇವಣ್ಣ,ಕರೋಟಿ ಶಂಕರ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
