ಕೊರಟಗೆರೆ:- ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರು ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ಅಂಬುಲೆನ್ಸ್ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸಂಕಷ್ಟ ಅನುಭವಿಸುವಂತಾಗಿದೆ.
ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಆಗಮಿಸುವ ಅಂಬುಲೆನ್ಸ್ಗಳಿಗೆ ಆಸ್ಪತ್ರೆಯೊಳಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ನೂರಾರು ದ್ವಿಚಕ್ರ ವಾಹನಗಳು ಆಸ್ಪತ್ರೆಯ ಆವರಣದಲ್ಲೇ ನಿಲುಗಡೆಯಾಗುತ್ತಿರುವುದರಿಂದ ತುರ್ತು ಸೇವೆಗಳ ಮೇಲೂ ಪರಿಣಾಮ ಬೀಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮೀಪದ ಖಾಸಗಿ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಕೆಲವರು ತಮ್ಮ ವಾಹನಗಳನ್ನು ಆಸ್ಪತ್ರೆಯ ಆವರಣದಲ್ಲೇ ದಿನಪೂರ್ತಿ ನಿಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಆಸ್ಪತ್ರೆಯ ಮೂಲ ಉದ್ದೇಶವಾದ ರೋಗಿಗಳ ಅನುಕೂಲಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವಾಹನಗಳನ್ನು ತೆರವುಗೊಳಿಸುವಂತೆ ಆಸ್ಪತ್ರೆ ಸಿಬ್ಬಂದಿ ಮನವಿ ಮಾಡಿದ ವೇಳೆ ಕೆಲವರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಗಳೂ ನಡೆದಿವೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಆವರಣವನ್ನು ಸಾರ್ವಜನಿಕ ಪಾರ್ಕಿಂಗ್ ಸ್ಥಳವಾಗಿ ಬಳಸುವುದಕ್ಕೆ ಕಡಿವಾಣ ಹಾಕಿ, ರೋಗಿಗಳು ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಂಡು ಆಸ್ಪತ್ರೆಯ ಶಿಸ್ತು ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
