ಟಿ.ನರಸೀಪುರ : ಯುವಕರಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಬೇಕಾದ 21 ವಿವಿಧ ರೀತಿಯ ಕೌಶಲ್ಯ ತರಬೇತಿಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ನೀಡಲಾಗುತ್ತಿದೆ ಎಂದು ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ ನಾಯಕ್ ಮಾಹಿತಿ ನೀಡಿದರು.
ಪಟ್ಟಣದ ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮಾರ್ಗದರ್ಶನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಮುದಾಯದ ಮಟ್ಟದಲ್ಲಿ ರೇಷ್ಮೆ ಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆ ಯಂತಹ ತರಬೇತಿಗಳು ಮತ್ತು ಎಲೆಕ್ಟ್ರಿಷಿಯನ್, ಮೊಬೈಲ್ ರಿಪೇರಿ, ಪ್ಲಮ್ಬಿಂಗ್, ಸ್ಪೋಕನ್ ಇಂಗ್ಲಿಷ್ ಬೇಸಿಕ್ ಕಂಪ್ಯೂಟರ್ ಲೈಫ್ ಸ್ಕಿಲ್, ಜನರಲ್ ಡ್ಯೂಟಿ ಅಸಿಸ್ಟಂಟ್, ಪಂಚಕರ್ಮ ತೆರಫಿ ಮತ್ತು ಯೋಗ ಬೇಸ್ಡ್ , ಬ್ಯೂಟಿಷಿಯನ್, ಫ್ಯಾಷನ್ ಡಿಸೈನಿಂಗ್ ನಂತಹ ಸಾಂಸ್ಥಿಕ ತರಬೇತಿಗಳನ್ನು ನೀಡುತ್ತಿದ್ದು ಕರ್ನಾಟಕದ 20 ಜಿಲ್ಲೆಗಳಿಂದ ಬಂದು ತರಬೇತಿ ಪಡೆದು ಉತ್ತಮ ಉದ್ಯೋಗವನ್ನು ಮಾಡುತ್ತಿದ್ದಾರೆ.

ಪ್ರಸ್ತುತ ಜನರಲ್ ಡ್ಯೂಟಿ ಅಸಿಸ್ಟಂಟ್ ಮತ್ತು ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಕೆಲವೇ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದ್ದು ಆಸಕ್ತಿ ಇರುವವರು ತ್ವರಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ತರಬೇತಿ ಸಮಯದಲ್ಲಿ ಸಂಸ್ಥೆಯ ವತಿಯಿಂದ ಉಚಿತ ಊಟ ಮತ್ತು ವಸತಿ ನೀಡಲಾಗುತ್ತಿದ್ದು ಉದ್ಯೋಗದ ವ್ಯವಸ್ಥೆಯನ್ನು ಸಹ ಮಾಡಿಕೊಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ತರಬೇತಿ ಪಡೆದವರಿಗೆ ಉದ್ಯೊಗಕ್ಕೆ ಹೆಚ್ಚು ಅವಕಾಶ ಇರುವುದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಯುವಕ ಯುವತಿಯರು ಮುಂದಾಗಬೇಕೆಂದರು.
ಶಿಬಿರಕ್ಕೆ ಆಗಮಿಸಿದ್ದ ಅಭ್ಯರ್ಥಿಗಳಿಗೆ ಸಂಸ್ಥೆಯಿಂದ ನೀಡಲಾಗುತ್ತಿರುವ ವಿವದ ಕೌಶಲ್ಯ ತರಬೇತಿಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿ ವಿವಿಧ ತರಬೇತಿಗಳಿಗೆ ಆಸಕ್ತಿ ಇರುವವರನ್ನು ನೋಂದಣಿ ಮಾಡಿಕೊಳ್ಳಲಾಯಿತು.

ವೇದಿಕೆಯಲ್ಲಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆಂಪರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ವಿ.ವೈ.ಎಂ ನ ವಿವೇಕ ಗ್ರಾಮೀಣ ಜೀವನದಾರ ಕೇಂದ್ರದ ವ್ಯವಸ್ಥಾಪಕ ಚಿನ್ನಮಹದೇವ, ಸಂಯೋಜಕ ಅಬ್ದುಲ್ ರಶೀದ್ ಸಿಬ್ಬಂಧಿಗಳಾದ ರುಕ್ಮಿಣಿ, ಸಿದ್ದರಾಜು, ನೇತ್ರ, ರವಿ ಹಾಗೂ ಕೌಶಲ್ಯ ತರಬೇತಿ ಆಸಕ್ತಿ ಇರುವ ಅಭ್ಯರ್ಥಿಗಳು ಭಾಗವಹಿಸಿದ್ದರು.
- ಎಂ.ನಾಗೇಂದ್ರಕುಮಾರ್
