ತುಮಕೂರು:ಕೃಷಿ ಮತ್ತು ತೋಟಗಾರಿಕೆಯನ್ನೇ ನಂಬಿ ಬದುಕುತ್ತಿರುವ ಆಗ್ನಿವಂಶ ಕ್ಷತ್ರೀಯ ತಿಗಳ ಸಮುದಾಯ, ಸೆಪ್ಟಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗುವ ಜಾತಿ ಗಣತಿಯ ವೇಳೆ ಜಾತಿ ಕಲಂನಲ್ಲಿ ತಿಗಳ ಎಂದು, ಉಪಜಾತಿ ಕಲಂನಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಎಂದು ನಮೂದಿಸುವಂತೆ ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎ.ಹೆಚ್.ಬಸವರಾಜು ಅವರು ಮನವಿ ಮಾಡಿದ್ದಾರೆ.
ನಗರದ ಶ್ರೀಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ಆಯೋಜಿಸಿದ್ದ ತಿಗಳ ಸಮುದಾಯದ ಮುಖಂಡರು,ಯಜಮಾನರುಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತಿಗಳರ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ, ರಾಜಕೀಯ ಉನ್ನತ್ತಿಗೆ ಈ ಜಾತಿಗಣತಿ ಬಹಳ ಪ್ರಮುಖವಾಗಿದೆ.ತಿಗಳ ಸಮುದಾಯ ರಾಜಕೀಯವಾಗಿ,ಅರ್ಥಿಕವಾಗಿ,ಸಾಮಾಜಿಕವಾಗಿ ಸಾಕಷ್ಟು ಹಿಂದೆ ಉಳಿದಿದೆ.ಸರಕಾರ ತಿಗಳ ಅಭಿವೃದ್ದಿಗಾಗಿ ಅಭಿವೃದ್ದಿ ನಿಗಮ ಘೋಷಣೆ ಮಾಡಿ ಮೂರು ವರ್ಷ ಕಳೆದರೂ ಇದುವರೆಗೂ ಅದಕ್ಕೆ ಅಧ್ಯಕ್ಷರ ನೇಮಕ ಆಗಿಲ್ಲ. ಅನುದಾನ ಬಿಡುಗಡೆಯಾಗಿಲ್ಲ.ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಈ ಸರಕಾರ ತಿಗಳ ಸಮುದಾಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿಲ್ಲ.ಐದು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಿಲ್ಲ.ಅನೇಕ ಬಾರಿ ಮನವಿ ಮಾಡಿದರು ಎನು ಪ್ರಯೋಜನವಾಗಿಲ್ಲ.ಕೇವಲ ಓಟ್ ಬ್ಯಾಂಕಾಗಿ ತಿಗಳ ಸಮುದಾಯವನ್ನು ಬಳಕೆ ಮಾಡಲಾಗುತ್ತಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊಟ್ಟ ಮಾತಿನಂತೆ ಆಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸುವಂತೆ ಮಾಡಿದ್ದಾರೆ. ತಿಗಳರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷದ ಸರಕಾರ ತಿಗಳ ಸಮುದಾಯವನ್ನು ತೀರ ನಿರ್ಲಕ್ಷಕ್ಕೀಡು ಮಾಡಿದೆ.ಅಲ್ಲದೆ ತಿಗಳ ಕ್ರಿಶ್ಚಿಯನ್ ಎಂಬ ಹೊಸ ಜಾತಿ ಸೇರ್ಪಡೆ ಮಾಡಲು ಮುಂದಾಗಿದೆ.ಇದನ್ನು ಸಮಸ್ತ ತಿಗಳ ಸಮುದಾಯ ವಿರೋಧಿಸುತ್ತದೆ. ಕೂಡಲೇ ತಿಗಳ ಕ್ರಿಶ್ಚಿಯನ್ ಎಂಬ ಹೊಸಜಾತಿಯನ್ನು ರದ್ದು ಮಾಡಬೇಕೆಂದು ಒತ್ತಾಯಿಸುವುದಾಗಿ ಎ.ಹೆಚ್.ಬಸವರಾಜು ತಿಳಿಸಿದರು.
ಮುಖಂಡರಾದ ರೇವಣಸಿದ್ದಯ್ಯ ಮಾತನಾಡಿ, ರಾಜ-ಮಹಾರಾಜರು ಯುದ್ಧದಲ್ಲಿ ಹೋರಾಡಲು ಕೊನೆಯ ಹಂತವಾಗಿ ತಿಗಳರಿಗೆ ವಿಳ್ಯ ಕಳುಹಿಸುತ್ತಿದ್ದ ಕಾಲವಿತ್ತು. ಹಾಗಾಗಿ ತಿಗಳರು ತಮ್ಮ ಜಾತಿ ಹೆಸರು ಹೇಳಲು ಹಿಂಜರಿಯುವ ಅಗತ್ಯವಿಲ್ಲ.ರಾಜ್ಯದಲ್ಲಿ ಸುಮಾರು 15-20 ಲಕ್ಷ ಜನಸಂಖ್ಯೆಯನ್ನು ತಿಗಳ ಸಮುದಾಯ ಹೊಂದಿದೆ.ಜಾತಿಗಣತಿಯಲ್ಲಿ ಸಿಗುವ ಅಂಕಿ ಅಂಶಗಳು ಸರಕಾರದ ಸವಲತ್ತುಗಳನ್ನು ಪಡೆದು ಅರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ,ಔದ್ಯೋಗಿಕವಾಗಿ ಮುಂದೆ ಬರಲು ಸಹಕಾರಿಯಾಗಲು ಸುವರ್ಣ ಅವಕಾಶವಾಗಿದೆ. ಭಾಷೆಯ ಕಲಂನಲ್ಲಿ ಕನ್ನಡ, ವೃತ್ತಿ ಕಲಂನಲ್ಲಿ ವ್ಯವಸಾಯ ಎಂದು ನಮೂದಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಯೋಗಾನಂದಕುಮಾರ್,ರವೀಶ್ ಜಹಂಗೀರ್, ಹಿರಿಯರಾದ ಕುಂಭಣ್ಣ, ಕೃಷ್ಣಪ್ಪ,ಯಜಮಾನರಾದ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
