ಕೆ.ಆರ್.ಪೇಟೆ,ಸೆ.22: ತಾಲ್ಲೂಕಿನ ಬಲಗೈ ದಲಿತ ಬಂಧುಗಳು ಈಗ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಧರ್ಮದ ಕಾಲಂ ನಲ್ಲಿ ಬೌದ್ದ ಧರ್ಮ ಎಂದು ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ ಎಂದು, ಉಪಜಾತಿ ಕಾಲಂ ನಲ್ಲಿ ಹೊಲಯ ಎಂದು ನಮೂದಿಸಬೇಕು ಎಂದು ಪುರಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕರಾದ ಡಿ.ಪ್ರೇಮಕುಮಾರ್ ಬಲಗೈ ಸಮುದಾಯದ ಬಂಧುಗಳಲ್ಲಿ ಮನವಿ ಮಾಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿ ದಲಿತರಿಗೆ ಎಲ್ಲರಂತೆ ಧಾರ್ಮಿಕ ಸಮಾನತೆ ಇಲ್ಲವಾಗಿದೆ. ಹಾಗಾಗಿ ನಾನು ಬೌದ್ದ ಧರ್ಮ ಸ್ವೀಕರಿಸುತ್ತೇನೆ. ನನ್ನ ಅನುಯಾಯಿಗಳು ಬೌದ್ದ ಧರ್ಮ ಸ್ವೀಕರಿಸಿ ಎಂದು ಹೇಳಿದ್ದರು.

ಅಂಬೇಡ್ಕರ್ ಅವರು ಈ ಮಾತನ್ನು ಹೇಳಿ ಸುಮಾರು 70ವರ್ಷಗಳು ಕಳೆದರೂ ಇಂದಿಗೂ ದಲಿತರಿಗೆ ದೇವಾಲಯಗಳಲ್ಲಿ ಮುಕ್ತ ಪ್ರವೇಶ ನೀಡುತ್ತಿಲ್ಲ. ಇಂತಹ ಧರ್ಮ ನಮಗೆ ಬೇಕಾ? ಎಂದು ಪ್ರಶ್ನಿಸಿದರು. ಹಾಗಾಗಿ ನಾವು ಧಾರ್ಮಿಕ ಸಮಾನತೆ ಬರುವವರೆವಿಗೂ ಬೌಧ್ದ ಧರ್ಮಕ್ಕೆ ಸೇರುತ್ತೇವೆ. ಧಾರ್ಮಿಕ ಸಮಾನತೆ ಬಂದ ನಂತರ ಘರ್ ವಾಪ್ಸಿ ಅಭಿಯಾನದ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಬರುತ್ತೇವೆ ಎಂದು ಡಿ.ಪ್ರೇಮಕುಮಾರ್ ಮಾರ್ಮಿಕವಾಗಿ ಹೇಳಿದರು. ಹಾಗಾಗಿ ಈಗ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ “ಬೌದ್ದ ಧರ್ಮ” ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ ಎಂದು, ಉಪ ಜಾತಿ ಕಾಲಂನಲ್ಲಿ “ಹೊಲಯ” ಎಂದು ಬರಸಬೇಕು ಎಂದು ಬಲಗೈ ಸಮುದಾಯದ ಬಂಧುಗಳಲ್ಲಿ ಡಿ.ಪ್ರೇಮಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ಪುರಸಭಾ ಸದಸ್ಯ ಬಿ.ಜಿ.ಗಿರೀಶ್, ಛಲವಾದಿ ಮಹಾಸಭಾ ಮಂಡ್ಯ-ಹಾಸನ ಉಸ್ತುವಾರಿ ಮಾಂಬಹಳ್ಳಿ ಜಯರಾಂ, ಸಂವಿಧಾನ ಸೇನೆ ತಾಲ್ಲೂಕು ಅಧ್ಯಕ್ಷ ಮುದುಗೆರೆ ಮಹೇಂದ್ರ, ಬಿಲ್ಲರಾಮನಹಳ್ಳಿ ವಿವೇಕ್, ರಾಮು, ಪವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
