ಕೆ.ಆರ್.ಪೇಟೆ,ಸೆ.25: 2028ಕ್ಕೆ ರಾಜ್ಯದಲ್ಲಿ ಸೂರ್ಯ-ಚಂದ್ರರು ಉದಯಿಸುವುದು ಎಷ್ಟು ಸತ್ಯವೋ, ಜೆಡಿಎಸ್-ಬಿಜೆಪಿ ಮೈತ್ರಿ ಕೂಟವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯವಾದುದಾಗಿದೆ. ಅದೇ ರೀತಿ ಇದೇ ಸೆ.28ರಂದು ನಡೆಯುವ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು 14ಸ್ಥಾನಗಳ ಪೈಕಿ ಎಲ್ಲಾ 14ಸ್ಥಾನಗಳಲ್ಲಿ ಅತ್ಯಧಿಕ ಮತಗಳನ್ನು ಜಯಬೇರಿ ಬಾರಿಸುವುದು ಖಚಿತ ಎಂದು ಶಾಸಕ ಹೆಚ್.ಟಿ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಶಿವಪುರ ಗ್ರಾಮದ ಬಳಿ ಟಿಎಪಿಸಿಎಂಎಸ್ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆಗೆ ಸ್ಪರ್ಧೆ ಮಾಡಿರುವ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಇದೂವರೆವಿಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಬಹುಮತದೊಂದಿಗೆ ಗೆಲುವು ಸಾಧಿಸಿ ಅಧಿಕಾರ ನಡೆಸಿದ್ದಾರೆ. ಆದರೆ 2014ರಲ್ಲಿ ಒಮ್ಮೆ ಮಾತ್ರ ಮಾಜಿ ಸ್ಪೀಕರ್ ಕೃಷ್ಣ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಒಂದು ಅವಧಿಯಲ್ಲಿ ಮಾತ್ರ ಅಧಿಕಾರ ಹಿಡಿದಿತ್ತು. ಅದು ಬಿಟ್ಟರೆ ಟಿಎಪಿಸಿಎಂಎಸ್ ಇತಿಹಾಸದಲ್ಲಿಯೇ ಕಾಂಗ್ರೆಸ್ ಗೆದ್ದ ಉದಾಹರಣೆ ಇಲ್ಲ. ಹಾಗಾಗಿ ಈ ಭಾರಿಯೂ ಸಹ ಟಿಎಪಿಸಿಎಂಎಸ್ ಚುನಾವಣೆಯನ್ನು ನಾವು ಸರ್ಕಾರದ ವಿರುದ್ದ ಮಾಡುತ್ತಿದ್ದೇವೆ. ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಗಳು ನಮಗೆ ಆಟಕ್ಕುಂಟು ಲೆಕ್ಕಿಕ್ಕಿಲ್ಲ. ಆದರೂ ನಾವು ಮೈಮರೆತು ಕುಳಿತುಕೊಳ್ಳುವಂತಿಲ್ಲ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರು ಹಿರಿಯರಾಗಿರುತ್ತಾರೆ ಅವರಿಗೆ ಮನವರಿಕೆ ಮಾಡಿ ನಮ್ಮ ಪಕ್ಷದ ಎಲ್ಲಾ 8ಮಂದಿ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಮಾಡಬೇಕು.

ಯಾವುದೇ ಕಾರಣಕ್ಕೂ ವಿರೋಧಿ ಪಕ್ಷಕ್ಕೆ ಒಂದೇ ಒಂದು ಮತಗಳು ಹಂಚಿಕೆಯಾಗದಂತೆ ನೋಡಿಕೊಳ್ಳಬೇಕು. ಬಿ.ವರ್ಗದಲ್ಲಿ 8ಮಂದಿ, ಎ.ವರ್ಗದಲ್ಲಿ 6ಮಂದಿ ಕಣದಲ್ಲಿದ್ದು ಎಲ್ಲರೂ ಗೆಲ್ಲುವಂತೆ ನೋಡಿಕೊಳ್ಳಬೇಕು. ಒಬ್ಬ ಅಭ್ಯರ್ಥಿ ಸೋತರೂ ಅದು ಉಳಿದ 13ಮಂದಿ ಗೆದ್ದರೂ ಸೋತಂತೆ ಆಗುತ್ತದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಪ್ರಚಾರಕ್ಕೆ ಕಾಲಾವಕಾಶ ಕಡಿಮೆ ಇರುವ ಕಾರಣ ಅಭ್ಯರ್ಥಿಗಳು ಪ್ರಚಾರಕ್ಕೆ ಬರಲಿಲ್ಲ, ಎಂದು ತಪ್ಪು ತಿಳಿದುಕೊಳ್ಳದೇ ನಾವೇ ಅಭ್ಯರ್ಥಿಗಳು ಎಂದು ತಿಳಿದು ಮತ ಪ್ರಚಾರ ಮಾಡಿ ನಮ್ಮ ಮೈತ್ರಿ ಪಕ್ಷಗಳ ಎಲ್ಲಾ ಅಭ್ಯರ್ಥಿಗಳು ಗೆಲ್ಲುವಂತೆ ಶ್ರಮಿಸಬೇಕು.
ಮತದಾನದ ದಿನ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸುವ ಜವಾಬ್ದಾರಿಯನ್ನು ಆಯಾ ಗ್ರಾಮಗಳ ಮುಖಂಡರು ಮತ್ತು ಕಾರ್ಯಕರ್ತರು ತೆಗೆದುಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.

ಕೇವಲ ಗ್ಯಾರಂಟಿ ಮುಳುಗಿದ ಸರ್ಕಾರ: ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿರುವ ರಾಜ್ಯ ಸರ್ಕಾರವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಯಾರಿಗೂ ಅನುಧಾನ ನೀಡದೇ ಇರುವ ಕಾರಣ ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಅವಧಿಯಲ್ಲಿ ಶಾಸಕನಾಗಬಾರದಿತ್ತು ಎಂದು ರಾಜ್ಯ ಸರ್ಕಾರದ ವಿರುದ್ದ ಶಾಸಕರು ಬೇಸರ ವ್ಯಕ್ತಪಡಿಸಿದರು.
ಪ್ರಚಾರ ಸಭೆಯಲ್ಲಿ ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಹರಳಹಳ್ಳಿ ಗ್ರಾ.ಪಂ.ಅಧ್ಯಕ್ಷ ಅಶೋಕ್, ಮುಖಂಡರಾದ ಹೆಳವೇಗೌಡ, ಶೀರ್ ಬಿಲ್ಲೇನಹಳ್ಳಿ ಮಂಜಣ್ಣ, ಐನೋರಹಳ್ಳಿ ಮಲ್ಲೇಶ್, ಅಜಯ್ ರಾಮೇಗೌಡ, ಬೇಲದಕೆರೆ ನಂಜಪ್ಪ, ಪಾಪೇಗೌಡ, ಚಟ್ಟೇನಹಳ್ಳಿ ನಾಗರಾಜು, ಬಿ.ಎಂ.ಕಿರಣ್, ಕಿಕ್ಕೇರಿ ಕೃಷ್ಣೇಗೌಡ, ಕೆ.ಬಿ.ನಾಗೇಶ್, ಎಸ್.ಆರ್.ನವೀನ್ಕುಮಾರ್, ಭೈರಾಪುರ ಹರೀಶ್, ಬಿ.ವರ್ಗದ ಅಭ್ಯರ್ಥಿಗಳಾದ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಕಿಕ್ಕೇರಿ ಕೆ.ಬಿ.ಮಧು, ನಾಗರಘಟ್ಟ ದಿಲೀಪ್ಕುಮಾರ್, ಎಂ.ಡಿ.ಜ್ಯೋತಿ, ಬಿ.ಆರ್.ಲತಾಮಣಿಮಂಜುನಾಥ್, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಎ.ವರ್ಗದ ಅಭ್ಯರ್ಥಿಗಳಾದ ಟಿ.ಬಲದೇವ್, ಬಿ.ಎಂ.ಕಿರಣ್, ಕುರುಬಹಳ್ಳಿ ಕೆ.ಬಿ.ನಾಗೇಶ್, ಹೆಚ್.ಟಿ.ಲೋಕೇಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
