ವಿಶೇಷ ವರದಿ : ಎಂ.ನಾಗೇಂದ್ರಕುಮಾರ್
ಟಿ.ನರಸೀಪುರ : ಕಾಂಗ್ರೆಸ್ ಪಕ್ಷದ ಐದು ಗ್ಯಾರೆಂಟಿಗಳಲ್ಲಿ ಅತಿ ಹೆಚ್ಚು ಚಾಲನೆಯಲ್ಲಿರುವುದು ಶಕ್ತಿ ಯೋಜನೆ.ಈ ಯೋಜನೆಯನ್ನು ಜಾರಿ ಮಾಡುವ ಮೊದಲು ಅದರ ಸಾಧಕ-ಭಾದಕಗಳನ್ನು ಪರಾಮರ್ಶಿಸಿ ಜಾರಿಗೆ ತಂದಿದ್ದರೆ ಮತ ಹಾಕಿ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಂದ ಮತ್ತಷ್ಚು ಪ್ರಶಂಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭಾಜನರಾಗುತ್ತಿದ್ದರು.
ಕಳೆದ ಎರೆಡೂವರೆ ವರ್ಷಗಳಿಂದ ಉಚಿತವಾಗಿ ಪ್ರಯಾಣಿಸುವ ಮಹಿಳೆಯರನ್ನು ಹೊರತುಪಡಿಸಿ ಬೇರೆ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಿದ್ದರೂ ಅದರ ಬಗ್ಗೆ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ ಎಂಬುದು ಕೂಡ ಜನತೆ ಪ್ರಶ್ನಿಸುವಂತ್ತಾಗಿದೆ.ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಅದೆಷ್ಟೋ ಪ್ರಯಾಣಿಕರು ಖಾಸಗಿ ಬಸ್ಸುಗಳಿದ್ದರೂ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಬರುತ್ತಿದ್ದ ಸಮಯವೊಂದಿತ್ತು.ಆದರೀಗ ಎಷ್ಟೋ ಪ್ರಯಾಣಿಕರು ಮತ್ತೆ ಖಾಸಗಿ ಬಸ್ಸುಗಳ ಮೊರೆ ಹೋಗುತ್ತಿರುವುದು ಸರ್ಕಾರದ ಬೇಜವಾಬ್ದಾರಿ ನಡೆಗೆ ಹಿಡಿದ ಕೈ ಗನ್ನಡಿಯಾಗಿದೆ.
ಐಷಾರಾಮಿ ಜೀವನದಲ್ಲಿ ಮಿಂದೇಳುತ್ತಿರುವ ಸರ್ಕಾರದ ಜನಪ್ರತಿನಿಧಿಗಳು ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದು ಸಾಮಾನ್ಯರಂತೆ ಬಸ್ ಹತ್ತಿ ನೋಡೋಣ…ಆಗ ತಿಳಿಯುತ್ತೆ ಪ್ರತಿದಿನ ಪ್ರಯಾಣಿಕರು ಪಡುತ್ತಿರುವ ಪಾಡು.ನಿಮ್ಮ ಯೋಜನೆ ಬಗ್ಗೆ ತಕರಾರಲ್ಲ.ಆದರೆ ಯೋಜನೆ ಜಾರಿ ಮಾಡುವ ಮೊದಲು ಎಲ್ಲಾ ಪ್ರಯಾಣಿಕರ ಅನುಕೂಲವನ್ನು ನೋಡಬೇಕು.ಕಳೆದ ಎರೆಡೂವರೆ ವರ್ಷಗಳಲ್ಲಿ ಎಷ್ಚೋ ಮಹಿಳೆಯರು ತಮಗೆ ತಾವೇ ಹೊಡೆದಾಡಿ,ಬಡಿದಾಡಿಕೊಳ್ಳುತ್ತಿದ್ದು,ಮದ್ಯದಲ್ಲಿ ಹಣ ಕೊಟ್ಟು ಪ್ರಯಾಣಿಸುವ ಪುರಷ ಪ್ರಯಾಣಿಕರು ನೆಮ್ಮದಿಯಾಗಿ ಸೀಟಿನಲ್ಲಿ ಕುಳಿತು ಪ್ರಯಾಣಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಎಷ್ಟೋ ವಿದ್ಯಾರ್ಥಿಗಳು ಬಸ್ಸುಗಳನ್ನು ಹತ್ತುವ ಸಂದರ್ಭದಲ್ಲಿ ಎದ್ದು,ಬಿದ್ದು ಗಾಯಮಾಡಿಕೊಂಡು ಜೊತೆಗೆ ಚಾಲಕರ ನಿರ್ಲಕ್ಷತೆಯಿಂದ ತೀರ್ವತರ ಗಾಯಗಳಾಗಿ ಪರಿತಪಿಸುತ್ತಿರುವ ಘಟನೆಗಳು ಸಹ ಪ್ರತಿನಿತ್ಯ ಘಟಿಸುತ್ತಲೇ ಇವೆ.ಸಮಯಕ್ಕೆ ಸರಿಯಾಗಿ ಶಾಲಾ,ಕಾಲೇಜುಗಳಿಗೂ ತಲುಪಲು ಸಾಧ್ಯವಾಗುತ್ತಿಲ್ಲ.ಪಾಠ,ಪ್ರವಚನಗಳಿಂದ ವಂಚಿತರಾಗಿ ನಮ್ಮ ಸಮಸ್ಯೆ ಯಾರ ಬಳಿ ಹೇಳೋಣ ಎಂದು ಮುಗ್ದತೆಯಿಂದ ಕಣ್ಣೀರು ಹಾಕುವ ಅದೆಷ್ಟೋ ವಿದ್ಯಾರ್ಥಿಗಳ ನೋವು ನಿಮಗೆ ಅರ್ಥವಾಗುತ್ತಿಲ್ಲವೇ…
ಬಡ,ಮದ್ಯಮ ವರ್ಗದ ಮಹಿಳೆಯರು,ಪುರುಷರು,ವಯೋವೃದ್ದರು,ವಿಶೇಷ ಚೇತನರು ಐಷಾರಾಮಿ ಬಸ್ಸುಗಳಲ್ಲಿ ಸಂಚರಿಸಲು ಸಾಧ್ಯವಾಗದಿರುವಾಗ ಕೆಂಪು ಬಸ್ಸುಗಳ ಪ್ರಯಾಣವನ್ನು ಅವಲಂಭಿಸಿರುತ್ತಾರೆ.ಇವರೆಲ್ಲಾ ಬಸ್ ನಿಲ್ದಾಣದಲ್ಲಿ ಬಸ್ ಬಂದಾಗ ಕಿಕ್ಕಿರಿದು ತುಂಬಿರುವ ಪ್ರಯಾಣಿಕರ ಮದ್ಯೆ ನೂಕಿ,ತಳ್ಳಿಕೊಂಡು ಹೋಗಲು ಸಾಧ್ಯವೇ…ಕಣ್ಣ ಮುಂದೆಯೇ ಅದೆಷ್ಚೋ ಪ್ರಯಾಣಿಕರು ವಾಪಸ್ಸು ಮನೆಗೆ ಹೋಗುತ್ತಿರುವ ಸಂದರ್ಭಗಳೂ ಪ್ರತಿನಿತ್ಯ ನಡೆಯುತ್ತಲೇ ಇವೆ.ಹಾಗಾದರೆ ಈ ಪ್ರಯಾಣಿಕರಿಗೆ ಸರ್ಕಾರಿ ಬಸ್ಸುಗಳಲ್ಲಿ ಕುಳಿತು ಪ್ರಯಾಣಿಸಲು ಅವಕಾಶವೇ ಇಲ್ಲವೇ…ಇದಕ್ಕೆ ಸರ್ಕಾರ ಉತ್ತರಿಸಬೇಕು.
ಹಗಲು,ರಾತ್ರಿ ಪ್ರಯಾಣಿಸುವಾಗ ಉಸಿರುಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.80 ರಿಂದ 90 ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಬಸ್ಸು ಪ್ರಯಾಣಿಕರಿಗೆ ಎಷ್ಟು ಸುರಕ್ಷಿತ.ಬಸ್ಸುಗಳ ನಿರ್ವಹಣೆ ಇಲ್ಲದೇ ಎಲ್ಲಂದರಲ್ಲಿ ಕೆಟ್ಟು ನಿಂತು ಹಿಂದೆ ಬರುವ ಬಸ್ಸುಗಳಿಗೆ ಹತ್ತಿಸುವ ಪರಿಸ್ಥಿತಿ ಬಂದೊದಗಿದೆ.ಹಿಂದೆ ಬರುವ ಬಸ್ಸುಗಳು ಸಹ ಪೂರ್ತಿ ಪ್ರಯಾಣಿಕರಿಂದ ತುಂಬಿ ತುಳುಕಿರುತ್ತವೆ.ಆದರೂ ಅಸಾಯಕ ಪರಿಸ್ಥಿತಿ ಒಬ್ಬರ,ಮೇಲೊಬ್ಬರು ಎದ್ದು,ಬಿದ್ದು ಹತ್ತಲೇಬೇಕು.ಇದರಿಂದ ಪ್ರಯಾಣಿಕರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಯೋಚಿಸಿದೆಯೇ…?ಮಾನಸಿಕವಾಗಿ ಜರ್ಜರಿತವಾಗುವ,ಸೂಕ್ಮ ಸಂವೇದನೆ ಇರುವ ಮನಸ್ಸುಗಳ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಬಹುದು.ಇದಕ್ಕೆ ಹೊಣೆ ಯಾರು?
ಉಚಿತ ಸೌಲಭ್ಯಗಳನ್ನು ನೀಡುವಾಗ ಮುಂದೆ ಆಗಬಹುದಾದ ಎಲ್ಲಾ ರೀತಿಯ ಅನುಕೂಲ, ಅನಾನುಕೂಲಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಜಾರಿಗೆ ತಂದಾಗ ಎಲ್ಲರಿಗೂ ಅನುಕೂಲವಾಗುತ್ತದೆ.ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ.ಇದರಿಂದ ಎಷ್ಟೋ ಜನಕ್ಕೆ ಅನುಕೂಲ ಇರಬಹುದು ಆದರೆ ಅಷ್ಚೇ ಪ್ರಮಾಣದ ಜನತೆಗೆ ಅನಾನುಕೂಲವೂ ಹೌದು.
ಈ ಯೋಜನೆಗೆ ಈಗಿರವ ಬಸ್ಸುಗಳು ಎಲ್ಲಿಗೂ ಸಾಕಾಗುವುದಿಲ್ಲ.ಪ್ರತಿನಿತ್ಯ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಏರುತ್ತಲೇ ಇದೆ.ಆಗಿದ್ದಾಗ ಬಸ್ಸುಗಳ ಸಂಖ್ಯೆಯನ್ನೂ ಸಹ ಸರ್ಕಾರ ಹೆಚ್ಚಿಸಲೇಬೇಕು.ಜೊತೆಗೆ ಕೆಲವು ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿ ಎಲ್ಲಾ ವರ್ಗದ ಜನರ ಸುಖಕರ ಪ್ರಯಾಣಕ್ಕೆ ಸರ್ಕಾರ ಅನುಕೂಲ ಕಲ್ಪಿಸಬೇಕು.ಅಧಿಕಾರಕ್ಕೆ ಬರುವ ಪಕ್ಷಗಳು ಮತದಾರರನ್ನು ಓಲೈಸಿ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಎಲ್ಲರ ಅನುಕೂಲವನ್ನು ನೋಡಲೇಬೇಕಲ್ಲವೇ…!
ಇಲ್ಲದಿದ್ದರೆ ಇದರ ಪರಿಣಾಮವನ್ನು ಸರ್ಕಾರಕ್ಕೆ ಮತದಾರರೇ ನೀಡುತ್ತಾರೆ.

[…] […]
[…] […]